alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾರಾಟ ಮಾಡಿದ್ದರೂ ದಾಖಲೆ ವರ್ಗಾಯಿಸದಿದ್ದವರು ಮಿಸ್ ಮಾಡ್ದೇ ಓದಿ

ಕೆಲವರು ತಮ್ಮ ವಾಹನಗಳನ್ನು ಮಾರಾಟ ಮಾಡಿದ್ದರೂ ದಾಖಲೆ ಪತ್ರಗಳನ್ನು ವಾಹನ ಕೊಂಡುಕೊಂಡವರ ಹೆಸರಿಗೆ ವರ್ಗಾಯಿಸುವ ಗೋಜಿಗೆ ಹೋಗುವುದಿಲ್ಲ. ಹಲವು ಕೈ ಬದಲಾವಣೆಯಾದರೂ ಆರ್.ಸಿ. ಬುಕ್ ನಲ್ಲಿ ಮೂಲ ಮಾಲೀಕರ ಹೆಸರೇ ಮುಂದುವರೆದಿರುತ್ತದೆ. ಅಂತವರಿಗೊಂದು ಮುಖ್ಯ ಮಾಹಿತಿ ಇಲ್ಲಿದೆ.

ಕಾರು ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಪರಿಹಾರ ನೀಡಲು ಮೂಲ ಮಾಲೀಕರೇ ಹೊಣೆಗಾರರಾಗಿರುತ್ತಾರೆಂದು ಹೇಳಿದೆ.

ವಿಜಯ್ ಕುಮಾರ್ ಎಂಬವರ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದ್ದು, ವಿಜಯ್ ಕುಮಾರ್ 2007 ರ ಜುಲೈ 12 ರಂದು ತಮ್ಮ ಕಾರನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಬಳಿಕ ಆತ ಅದನ್ನು 2008 ರ ಸೆಪ್ಟೆಂಬರ್ 18 ರಂದು ಮತ್ತೊಬ್ಬನಿಗೆ ಮಾರಾಟ ಮಾಡಿದ್ದ. ಆತನೂ ಈ ಕಾರನ್ನು ಮರು ಮಾರಾಟ ಮಾಡಿದ್ದು, ಇದನ್ನು ಖರೀದಿಸಿದ್ದ ನವೀನ್ ಕುಮಾರ್ ಅಂತಿಮವಾಗಿ ಮೀರ್ ಸಿಂಗ್ ಎಂಬವರಿಗೆ ಮಾರಿದ್ದರು. ಗಮನಾರ್ಹ ಸಂಗತಿಯೆಂದರೆ ಇಷ್ಟೆಲ್ಲಾ ಕೈ ಬದಲಾವಣೆಯಾದರೂ ಕಾರು ಮಾತ್ರ ಮೂಲ ಮಾಲೀಕ ವಿಜಯ್ ಕುಮಾರ್ ಅವರ ಹೆಸರಿನಲ್ಲೇ ಇತ್ತು.

ಕಾರು ಮೀರ್ ಸಿಂಗ್ ಸುಪರ್ದಿನಲ್ಲಿರುವಾಗಲೇ ಮೇ 27, 2009 ರಂದು ಅದನ್ನು ಚಲಾಯಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಅಪಘಾತವೆಸಗಿದ್ದು, ಓರ್ವ ಸಾವನ್ನಪ್ಪಿ ಮತ್ತೊಬ್ಬ ಗಾಯಗೊಂಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಟ್ರಿಬ್ಯೂನಲ್ 3.85 ಲಕ್ಷ ರೂ. ಪರಿಹಾರ ವಿತರಿಸಲು ಆದೇಶಿಸಿತ್ತಲ್ಲದೇ ಇದನ್ನು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹಾಗೂ ಕಾರಿನ ಮಾಲೀಕ (ದಾಖಲೆ ಪ್ರಕಾರ) ವಿಜಯ್ ಕುಮಾರ್ ಭರಿಸಬೇಕೆಂದು ಹೇಳಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಕುಮಾರ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ತೀರ್ಪು ಅವರ ಪರ ಬಂದಿತ್ತು. ಇದರ ವಿರುದ್ದ ಸುಪ್ರೀಂ ಕೋರ್ಟ್ ಗೆ ಹೋಗಿದ್ದು, ಈಗ ಸುಪ್ರೀಂ ಕೋರ್ಟ್ ಟ್ರಿಬ್ಯೂನಲ್ ತೀರ್ಮಾನವನ್ನು ಎತ್ತಿ ಹಿಡಿದಿದೆ. ಕಾರು ಯಾರ ಹೆಸರಿನಲ್ಲಿದೆಯೇ ಅವರೇ ಮಾಲೀಕರೆಂದು ಪರಿಗಣಿಸಲಾಗಿದ್ದು, ವಿಜಯ್ ಕುಮಾರ್ ಪರಿಹಾರ ನೀಡಬೇಕೆಂದು ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...