alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮೊಳಗಿದೆ ಮಂಗಳವಾದ್ಯ

23 ವರ್ಷದ ಪವನ್ ಕುಮಾರ್ ಕೆಲ ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಆತನ ಗ್ರಾಮಸ್ಥರಿಗೆ ಇನ್ನಿಲ್ಲದ ಸಂತಸ. ತಮ್ಮ ಗ್ರಾಮಕ್ಕೆ ತಟ್ಟಿದ ಕಳಂಕವೊಂದು ಕೊನೆಗೂ ತಪ್ಪಿತೆಂಬ ಸಮಾಧಾನ ಅವರಲ್ಲಿ ಆವರಿಸಿತ್ತು. ಹೀಗಾಗಿ ಪವನ್, ಮಧ್ಯ ಪ್ರದೇಶದ ಯುವತಿಯನ್ನು ವಿವಾಹವಾದ ವೇಳೆ ವಧು ಹಾಗೂ ಆಕೆಯ ಕುಟುಂಬಸ್ಥರಿಗೆ ಗ್ರಾಮಸ್ಥರು ಭಾರೀ ಆತಿಥ್ಯವನ್ನೇ ನೀಡಿದ್ದಾರೆ.

ಇದು ರಾಜಸ್ಥಾನದ ಧೋಲಾಪುರ್ ಜಿಲ್ಲೆಯ ರಾಜ್ಘಾಟ್ ಗ್ರಾಮದ ಕಥೆ. ಧೋಲಾಪುರ್ ನಗರದಿಂದ ಕೂಗಳತೆ ದೂರದಲ್ಲಿದ್ದರೂ ಈ ಗ್ರಾಮ ಬಹುತೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಚಂಬಲ್ ನದಿ ತೀರದ ಬಳಿ ರಾಜ್ಘಾಟ್ ಗ್ರಾಮವಿದ್ದರೂ ಕುಡಿಯಲು ಸ್ವಚ್ಚ ನೀರು ಗ್ರಾಮಸ್ಥರಿಗೆ ಮರೀಚಿಕೆಯಾಗಿತ್ತು. ವಿದ್ಯುತ್, ರಸ್ತೆ, ಶಾಲೆ ಹೀಗೆ ಸಕಲ ಸೌಲಭ್ಯಗಳಿಂದಲೂ ಈ ಗ್ರಾಮ ವಂಚಿತವಾಗಿತ್ತು. ಈ ಕಾರಣಕ್ಕೆ ಹೆಣ್ಣು ಹೆತ್ತವರು ರಾಜ್ಘಾಟ್ ಯುವಕರಿಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಿದ್ದರು. 1996 ರಲ್ಲಿ ನಡೆದ ವಿವಾಹವೇ ಕೊನೆ, ಬಳಿಕ ಈ ಗ್ರಾಮದಲ್ಲಿ ಮಂಗಳವಾದ್ಯವೇ ಮೊಳಗಿರಲಿಲ್ಲ.

ಈ ಕಾರಣಕ್ಕಾಗಿಯೇ 22 ವರ್ಷಗಳ ಬಳಿಕ ಪವನ್ ಕುಮಾರ್ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಗ್ರಾಮಸ್ಥರು ತಮ್ಮ ಮನೆಯ ಮದುವೆ ಎಂಬಂತೆ ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕೆ ಕಾರಣವಾಗಿದ್ದು, ಧೋಲಾಪುರ್ ಮೂಲದ ಅಶ್ವನಿ ಪರಾಶರ್ ಎಂಬ ವೈದ್ಯಕೀಯ ವಿದ್ಯಾರ್ಥಿ ಎಂಬುದು ಗಮನಾರ್ಹ. ಜೈಪುರ್ ನ ಸವಾಯಿ ಮಾನ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವನಿ ಪರಾಶರ್, ರಾಜ್ಘಾಟ್ ಗ್ರಾಮದ ಪರಿಸ್ಥಿತಿ ಕುರಿತು ರಾಜಸ್ಥಾನ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಗ್ರಾಮದಲ್ಲಿನ ಸಮಸ್ಯೆಗಳನ್ನು ವಿವರಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದರು. ಇದರ ಫಲವಾಗಿ ಈಗ ಗ್ರಾಮಕ್ಕೆ ಕೆಲ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು, ಹೆಣ್ಣು ಹೆತ್ತವರು ಈ ಗ್ರಾಮದ ಯುವಕರಿಗೆ ಮದುವೆ ಮಾಡಿಕೊಡಲು ಈಗ ಮುಂದಾಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...