alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಬಾಲಿವುಡ್ ನಟಿ ‘ಶ್ರೀದೇವಿ’ ಇನ್ನಿಲ್ಲ

ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ತೀವ್ರ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. ಸಂಬಂಧಿ ಮೋಹಿತ್ ಮಾರ್ವಾ ವಿವಾಹ ಸಮಾರಂಭಕ್ಕಾಗಿ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಕುಶಿ ಜೊತೆ ತೆರಳಿದ್ದ 54 ವರ್ಷದ ಶ್ರೀದೇವಿಯವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಶ್ರೀದೇವಿ ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿದ್ದರು. 1978 ರಲ್ಲಿ ”ಸೋಲಾ ಸಾವನ್” ಚಿತ್ರದ ಮೂಲಕ ಶ್ರೀದೇವಿ ಬಾಲಿವುಡ್ ಗೆ ಕಾಲಿಟ್ಟಿದ್ದರಾದರೂ ಜೀತೇಂದ್ರ ಜೊತೆಗಿನ ‘ಹಿಮ್ಮತ್ ವಾಲಾ’ ಚಿತ್ರದ ಬಳಿಕ ಶ್ರೀದೇವಿ ಬಲು ಬೇಡಿಕೆಯ ನಾಯಕಿಯಾದರು.

”ಮವಾಲಿ” (1983), “ತೋಫಾ” (1984), “ಮಿಸ್ಟರ್ ಇಂಡಿಯಾ” (1987) ಹಾಗೂ “ಚಾಂದಿನಿ” (1989) ಚಿತ್ರಗಳು ಶ್ರೀದೇವಿಯವರಿಗೆ ಖ್ಯಾತಿಯನ್ನು ತಂದುಕೊಟ್ಟಿದ್ದು, “ಸದ್ಮಾ” (1983), “ಚಾಲ್ ಬಾಜ್” (1989), “ಲಮ್ಹೆ” (1991), ಹಾಗೂ “ಗುಮ್ರಾ” (1993) ಅವರ ಶ್ರೇಷ್ಟ ಅಭಿನಯಕ್ಕೆ ಸಾಕ್ಷಿಯಾಗಿದ್ದವು. ಶ್ರೀದೇವಿಯವರ ಕಲಾ ಸೇವೆಯನ್ನು ಪರಿಗಣಿಸಿ 2013 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಚಿತ್ರ ನಿರ್ಮಾಪಕ ಬೋನಿ ಕಪೂರ್ ಜೊತೆ ವಿವಾಹವಾದ ಶ್ರೀದೇವಿಯವರಿಗೆ ಜಾಹ್ನವಿ ಹಾಗೂ ಕುಶಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ”ಜುದಾಯಿ” ಚಿತ್ರದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ತೆರೆಮರೆಗೆ ಸರಿದಿದ್ದ ಶ್ರೀದೇವಿ, 2012 ರಲ್ಲಿ ‘ಇಂಗ್ಲೀಷ್ ವಿಂಗ್ಲೀಷ್’ ಚಿತ್ರದ ಮೂಲಕ ಮತ್ತೆ ಅಭಿನಯಕ್ಕೆ ಮರಳಿದ್ದರು. ವಿಜಯ್ ಹಾಗೂ ಕಿಚ್ಚ ಸುದೀಪ್ ಜೊತೆಗೆ ‘ಪುಲಿ’ ತಮಿಳು ಚಿತ್ರದಲ್ಲಿ ಶ್ರೀದೇವಿ ಅಭಿನಯಿಸಿದ್ದು, ಮತ್ತೆ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಾಗಲೇ ಬಾರದ ಲೋಕಕ್ಕೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...