alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರು ರಾಜ್ಯದ ಮೊದಲ ಸಚಿವ ಸಂಪುಟದ ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಡಾ.ಜಿ. ಪರಮೇಶ್ವರ್ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ಸಚಿವ ಸಂಪುಟದ ಲಾಬಿ ಆರಂಭವಾಗಿದೆ.

ಈ ಸಚಿವ ಸಂಪುಟ ರಚನೆಯ ಬಗ್ಗೆ ನಿಮಗೆ ಕ್ಷಣ ಕ್ಷಣದ ಮಾಹಿತಿ ಸಿಗುತ್ತೆ. ಆದರೆ ಇಲ್ಲೊಂದು ಮಾಹಿತಿ ಇದೆ ನೋಡಿ. ಇದು ಮೈಸೂರು ರಾಜ್ಯದ ಮೊಟ್ಟ ಮೊದಲ ಸಚಿವ ಸಂಪುಟಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿ.

ಅಂದಿನ ಮೈಸೂರು ಸಂಸ್ಥಾನದಾದ್ಯಂತ ಪ್ರತ್ಯೇಕ ರಾಜ್ಯ ಸರ್ಕಾರ ರಚನೆಯ ಕೋರಿಕೆಯು ನಿರಂತರವಾಗಿದ್ದು, 1947 ರ ಸೆಪ್ಟೆಂಬರ್ 24 ರಂದು ಪ್ರಜಾ ಚಳುವಳಿ ಉಲ್ಬಣ ಸ್ಥಿತಿ ತಲುಪಿತು. ಕೆ.ಸಿ. ರೆಡ್ಡಿಯವರ ನಾಯಕತ್ವದಲ್ಲಿ 42 ದಿನಗಳ ಕಾಲ ಚಳುವಳಿ ತೀವ್ರವಾಗಿ ನಡೆಯಿತು.

ಇದರಿಂದ ಸರ್ಕಾರದ ಕಾರ್ಯಕಲಾಪಗಳು ಸ್ಥಗಿತಗೊಂಡವು. ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಕಾಂಗ್ರೆಸ್ ನಾಯಕ ಕೆ.ಸಿ. ರೆಡ್ಡಿ ಅವರ ಜೊತೆ ಮಾತುಕತೆ ನಡೆಸಿದರು. ಇದರ ಫಲಿತಾಂಶ 1947ರ ಅಕ್ಟೋಬರ್ 24ರ ವಿಜಯದಶಮಿಯಂದು ತಾತ್ಕಾಲಿಕ ರಾಜ್ಯಸರ್ಕಾರ ಸ್ಥಾಪನೆಯಾಗಿ 1948ರ ಜುಲೈ ಹೊತ್ತಿಗೆ ಮೈಸೂರು ಸಂಸ್ಥಾನಕ್ಕೆ ರಾಜ್ಯಾಂಗ ಸಿದ್ಧಪಡಿಸುವ ತೀರ್ಮಾನ ಮಾಡಲಾಯಿತು.

ಮೈಸೂರು ಮಹಾರಾಜರ ಒಪ್ಪಿಗೆಯಂತೆ 1947ರ ಅಕ್ಟೋಬರ್ 29ರಂದು ಮಂತ್ರಿಗಳನ್ನು ಒಳಗೊಂಡ ಮೈಸೂರು ರಾಜ್ಯ ಪ್ರಜಾಪ್ರತಿನಿಧಿಗಳ ಮಂತ್ರಿಮಂಡಲ ಅಂದರೆ ಸಚಿವ ಸಂಪುಟ ರಚನೆಯಾಯಿತು. ಭಾರತ ಪ್ರಜಾಪ್ರಭುತ್ವ ಒಕ್ಕೂಟ ಅಸ್ತಿತ್ವಕ್ಕೆ ಬಂದ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ ನೇತೃತ್ವದ ಮೈಸೂರು ರಾಜ್ಯದ ಪ್ರಪ್ರಥಮ ಮಂತ್ರಿಮಂಡಲದ ವಿವರ ಹೀಗಿದೆ.

ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿ ಕೆ.ಸಿ. ರೆಡ್ಡಿ. (ಕಾಂಗ್ರೆಸ್)

ಆರ್ಥಿಕ ಮತ್ತು ಕೈಗಾರಿಕೆ ಸಚಿವರಾಗಿ ಹೆಚ್. ಸಿ. ದಾಸಪ್ಪ. (ಕಾಂಗ್ರೆಸ್)

ಕಾನೂನು ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕೆ.ಟಿ. ಭಾಷ್ಯಂ. (ಕಾಂಗ್ರೆಸ್)

ಕಂದಾಯ ಮತ್ತು ರೈಲ್ವೆ ಸಚಿವರಾಗಿ ಹೆಚ್. ಸಿದ್ದಯ್ಯ (ಕಾಂಗ್ರೆಸ್)

ಗೃಹ ಸಚಿವರಾಗಿ ಟಿ. ಮರಿಯಪ್ಪ. (ಕಾಂಗ್ರೆಸ್)

ಸ್ಥಳೀಯ ಸ್ವಯಂ ಮಂಡಳಿ ಸಚಿವರಾಗಿ ಆರ್. ಚೆನ್ನಿಗರಾಮಯ್ಯ. (ಕಾಂಗ್ರೆಸ್)

ಆರೋಗ್ಯ ಮತ್ತು ಅಬಕಾರಿ ಖಾತೆ ಸಚಿವರಾಗಿ ಜನಾಬ್ ಮಹಮ್ಮದ್ ಶರೀಫ್. (ಕಾಂಗ್ರೆಸ್ಸೇತರ)

ಶಿಕ್ಷಣ ಖಾತೆ ಸಚಿವರಾಗಿ ಡಿ.ಹೆಚ್. ಚಂದ್ರಶೇಖರಯ್ಯ. (ಕಾಂಗ್ರೆಸ್ಸೇತರ)

ಮುನಿಸಿಪಾಲಿಟಿ ಮತ್ತು ಮುಜರಾಯಿ ಸಚಿವರಾಗಿ ಪಿ. ಸುಬ್ಬರಾಯ ಚೆಟ್ಟಿ. (ಕಾಂಗ್ರೆಸ್ಸೇತರ)

ಈ ಸಚಿವ ಸಂಪುಟ 1947 ರ ಅಕ್ಟೋಬರ್ ನಿಂದ 1952ರ ಮಾರ್ಚ್ ವರೆಗೆ ಅಸ್ತಿತ್ವದಲ್ಲಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...