alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಪ್ಸ್ ಯೋಗವೆಂದರೇನು…?

Dwi-Pada-Viparita-Dandasana-472x338-300x214-1

ಯೋಗ ಮಾಡಿದ್ರೆ ದೇಹಕ್ಕೂ ಮನಸ್ಸಿಗೂ ತುಂಬಾ ಒಳ್ಳೆಯದು ಅಂತಾ ಗೊತ್ತಿದೆ. ಇಡೀ ಜಗತ್ತೇ ನಮ್ಮ ಭಾರತೀಯ ಯೋಗಕ್ಕೆ ಮನ ಸೋತಿರುವಾಗ, ಆ ಯೋಗದಿಂದಾಗುವ ಶುಭ- ಲಾಭಗಳನ್ನು ಕಂಡುಕೊಂಡು ಕೊಂಡಾಡುತ್ತಿರುವಾಗ, ನಾನೂ ಯಾಕೆ ಯೋಗವನ್ನು ಕಲಿಯಬಾರದು ? ಎಂಬ ಪ್ರಶ್ನೆ ಕೆಲವರನ್ನಾದರೂ ಕಾಡಿರುತ್ತದೆ.

ಅಲ್ಲದೇ ಇಂದಿನ ಬಹುತೇಕ ಡಾಕ್ಟರ್ ಗಳೂ ಸಹ ಸ್ವಲ್ಪ ಯೋಗ- ಪ್ರಾಣಾಯಾಮವನ್ನು ಮಾಡಿ ಎಂಬ ಕಿವಿ ಮಾತು ಸಹ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಶಂಖದಿಂದ ಬಿದ್ದರೆ ಮಾತ್ರ ತೀರ್ಥ ಎನ್ನೋ ಮನೋಭಾವದ ಭಾರತೀಯರು ನಾವು ! ಎಲ್ಲಾ ಸರಿ, ಯೋಗ ಕಲಿಯುವ, ಮಾಡುವ ಮನಸ್ಸಿದೆ. ಆದರೆ ದೇಹ ಸಹಕರಿಸುವುದು ಅಷ್ಟು ಸುಲಭದ ಮಾತಲ್ಲ. ಉಂಡಾಡಿ ಗುಂಡನಂತೆ ಇದ್ದವರಿಗಂತೂ ದೇಹವೆನ್ನುವುದು ಕಬ್ಬಿಣದ ಅಂಗಡಿಯಂತಿರುತ್ತದೆ.

ಇದ್ದಕ್ಕಿದ್ದಂತೆ ಯೋಗ, ವ್ಯಾಯಾಮವೆಂದು ಶರೀರಕ್ಕೆ ಶ್ರಮವೆನಿಸುವ ಏನನ್ನೇ ಮಾಡಿದರೂ ಶರೀರ ಅಂತಹ ಸನ್ನಿವೇಶ, ಸಂದರ್ಭಗಳಿಗೆ ಒಗ್ಗಿಕೊಳ್ಳುವುದಿಲ್ಲ. ತಕ್ಷಣದ ಬದಲಾವಣೆಗಳನ್ನು ಮನಸ್ಸು ಸಹ ಒಪ್ಪಿಕೊಳ್ಳುವುದಿಲ್ಲ. ಆದರೆ ಯೋಗದ ಗುಟ್ಟೇ ಮನಸ್ಸು, ಶರೀರ, ಉಸಿರಾಟಗಳು. ಯೋಗಾಯೋಗದ, ಸತ್ಯಾಸತ್ಯತೆಗಳ ಬಗ್ಗೆ ಅರಿವಿದೆ. ಏನ್ಮಾಡೋದು, ಜಡ್ಡುಗಟ್ಟಿದಂತಾಗಿರುವ ಈ ದೇಹವನ್ನಿಟ್ಟುಕೊಂಡು ಅಷ್ಟು ಸಲೀಸಾಗಿ ಯೋಗಾಸನ ಮಾಡಲು ಕಲಿಯಲು ಸಾಧ್ಯವೇ?ಎಂಬ ಹತ್ತಾರು ಪ್ರಶ್ನೆಗಳಿಗೆ ಸರಳ ಉತ್ತರವೇ ಈ ಪ್ರಾಪ್ಸ್ ಯೋಗ.

ಪ್ರಾಪ್ಸ್ ಯೋಗದಲ್ಲಿ ಪ್ರಾಪ್ಸ್ ಎಂದರೆ ಪ್ರಾಪರ್ಟಿಸ್ ಅರ್ಥಾತ್ ಸಲಕರಣೆಗಳು ಕನ್ನಡದಲ್ಲಿ ಹೇಳಬಹುದಾದರೆ ಸಲಕರಣೆಗಳೊಂದಿಗೆ ಯೋಗ ಎನ್ನಬಹುದು. ಮಕ್ಕಳು ಮಾಡಿದಷ್ಟು ಅಥವಾ ನಿರಂತರ ಅಭ್ಯಾಸದಲ್ಲಿರುವವರು ಮಾಡುವಷ್ಟು ಸಲೀಸಾಗಿ ಯೋಗಾಸನಗಳನ್ನು ಮಾಡಲು ಹೊಸಬರಿಂದ ಖಂಡಿತ ಸಾಧ್ಯವಿಲ್ಲ. ಸಾಧ್ಯವಿರಬಹುದಾದರೂ ಸಹ ನಿರಂತರ ಸಾಧನೆ ಮತ್ತು ಸಮಯ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಮಗೆ ಯೋಗ ಕಲಿಯಲು ಪ್ರೇರೇಪಣೆ, ಆಸಕ್ತಿ ಮೂಡಿಸುವುದೇ ಈ ಪ್ರಾಪ್ಸ್ ಯೋಗ. ವಯಸ್ಸಾಗಿದ್ದರೂ, ರೋಗವಿದ್ದರೂ, ದಪ್ಪಗಿದ್ದರೂ, ಅಡ್ಡಡ್ಡ- ಉದ್ದುದ್ದ ಬೆಳೆದಿದ್ದರೂ ಸಹ ಯೋಗ ಕಲಿಕೆಯ ಕೆಚ್ಚು ಮೂಡಿಸಿ ಹುಚ್ಚು ಹಿಡಿಸುವುದೇ ಈ ಪ್ರಾಪ್ಸ್ ಯೋಗ.

ಯಾವುದೇ ಆಸನದ ಅಂತಿಮ ಸ್ಥಿತಿಯಲ್ಲಿ ಸ್ಥಿರವಾಗಿರಬೇಕು. ಸುಖವಾಗಿರಬೇಕು. ಸಹಜ ಉಸಿರಾಟದೊಂದಿಗಿರಬೇಕು ಎಂಬ ಮಾತನ್ನೇ ಯೋಗಶಾಸ್ತ್ರದ ಪಿತಾಮಹನಾದ ಪತಂಜಲಿ ಮಹರ್ಷಿಗಳು ‘ಸ್ಥಿರಂ ಸುಖಂ ಆಸನಂ’ ಎಂದು ಯೋಗಾಸನದ ವರ್ಣನೆಯನ್ನು ಶ್ಲೋಕ ರೂಪದಲ್ಲಿ ಹೇಳಿದ್ದಾರೆ. ಹೆಚ್ಚು ಸಮಯ ಆಸನದ ಅಂತಿಮ ಸ್ಥಿತಿಯಲ್ಲಿ ನೆಲೆಸಿದಷ್ಟೂ ಹೆಚ್ಚೆಚ್ಚು ಲಾಭವಿದೆ ಎಂದು ಗೊತ್ತು. ಆದರೆ ಸಾಮಾನ್ಯ ಯೋಗ ತರಗತಿಗಳಲ್ಲಿ ಯೋಗ ಶಿಕ್ಷಕರು 1…2…3 ಎಂದು ಅಂಕಗಳನ್ನು ಹೇಳುತ್ತಾ 10-20-30 ಸೆಕೆಂಡುಗಳಾಗುವಷ್ಟರಲ್ಲಿ ಭೂಕಂಪದ ಅನುಭವವಾದಂತಾಗಿ ಯೋಗಾಭ್ಯಾಸಿಗಳ ನರ-ನಾಡಿಗಳಲ್ಲಿ ಕಂಪನದ ದಿವ್ಯಾನುಭವ(!) ಶುರುವಿಟ್ಟುಕೊಂಡಿರುತ್ತದೆ. ಹೂವೇ.. ಹೂವೇ.. ಹಾಡಿನ ಬದಲು ನೋವೇ.. ನೋವೇ.. ಎಂದು ಗುನುಗುವಂತಾಗಿರುತ್ತದೆ. ನೋವಿನಲ್ಲೂ ನಲಿವಿದೆ. ಈ ನೋವು ಬೇರೆ ನೋವಿನಂತಲ್ಲ, ಇದು ಆರೋಗ್ಯವನ್ನು ಹೆಕ್ಕಿಸುವ, ಉಕ್ಕಿಸುವ ನೋವು ಅದಕ್ಕೆಂದೇ ಬಹುತೇಕ ಯೋಗ ಶಿಕ್ಷಕರು “Enjoy the pain keep Smiling” ಎಂದು ಹುರಿದುಂಬಿಸುತ್ತಿರುತ್ತಾರೆ.

ಆದರೆ ಪ್ರಾಪ್ಸ್ ಯೋಗ ಪದ್ದತಿಯ ಯೋಗ ಕಲಿಕೆಯಲ್ಲಿ ನಿರಾಯಾಸವಾಗಿ ಆಸನದ ಅಂತಿಮ ಸ್ಥಿತಿಯಲ್ಲಿ ಹೆಚ್ಚು ಸಮಯ ಆನಂದದಿಂದ ನೆಲೆಸಬಹುದಾಗಿದೆ. ಕಾರಣ ಯೋಗಾಭ್ಯಾಸಿಗೆ ಸಹಕರಿಸುವ ಪ್ರಾಪ್ಸ್ ಅಥವಾ ಯೋಗ ಸಲಕರಣೆಗಳು. ಈ ಪ್ರಾಪ್ಸ್ ಯೋಗದ ಜನಕ ಕರ್ನಾಕಟದವರೇ ಆದ ಆಧುನಿಕ ಯೋಗ ಪಿತಾಮಹ ದಿ. ಡಾ|| ಬಿ.ಕೆ.ಎಸ್.ಐಯ್ಯಂಗಾರ್.

ಐಯ್ಯಂಗಾರ್ ಯೋಗ ಶೈಲಿ ಎಂದೇ ಇಂದಿನ ದಿನಗಳಲ್ಲಿ ಪ್ರಸಿದ್ದಿಯಾಗಿರುವ ಈ ವಿಧಾನದಲ್ಲಿ ವಯಸ್ಸಿನ ಮಿತಿಯಿಲ್ಲದೇ ಆಸಕ್ತಿಯಿರುವ ಯಾರು ಬೇಕಾದರೂ ಯೋಗಾಸನಗಳನ್ನು ಮಾಡಬಹುದಾಗಿದೆ. ಮಂಡಿ ನೋವಿರಲಿ, ಬೆನ್ನು ನೋವಿರಲಿ, ಸೊಂಟ ನೋವಿರಲಿ, ಅಶಕ್ತರಾಗಿರಲಿ, ಅಂತಹವರಿಗೆ ಧೈರ್ಯ ಮೂಡಿಸಿ ಚೈತನ್ಯವನ್ನು ತುಂಬಿಸಿ ಯೋಗಾಸನ ಕಲಿಯುವಂತೆ ಮಾಡಿಸುವ, ಅನಾರೋಗ್ಯದಿಂದ ಆರೋಗ್ಯದೆಡೆಗೆ ಸಾಗುವಂತೆ ಮಾಡುವ ಪ್ರಾಪ್ಸ್ ಯೋಗಗಳಾದರೂ ಯಾವುವು ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದಲ್ಲವೇ ? ಆ ಪ್ರಾಪ್ಸ್ ಗಳನ್ನು ಯಾವುದೆಂದು ತಿಳಿದುಕೊಂಡ ಮೇಲೆ ಓದುಗರಾದ ನೀವುಗಳು ಹೀಗಂದುಕೊಳ್ಳಬಹುದೇನೋ? ಯೋಗವನ್ನು ಹೀಗೂ ಕಲಿಯಲು ಸಾಧ್ಯವೇ ? ಕ್ರಿಕೆಟ್, ಟೆನಿಸ್, ಗಾಲ್ಪ್ ಇತ್ಯಾದಿ ಕ್ರೀಡಾ ಕಿಟ್ ಗಳಂತೆ ಯೋಗದ (ಕಿಟ್) ಸಲಕರಣೆಗಳೂ ದುಬಾರಿ ಇರಬಹುದೇನೋ? ಎಂಬ Worry ಇಷ್ಟೊತ್ತಿಗಾಗಲೇ ನಿಮಗೆ ಶುರುವಾಗಿರಬಹುದಲ್ಲವೇ? ಇನ್ನಷ್ಟು ಎಳೆಯದೇ ಈಗ ನೇರವಾಗಿ ಆ ಪ್ರಾಪ್ಸ್ ಅಂದರೆ ಯೋಗ ಸಲಕರಣೆಗಳು ಯಾವುದೆಂದು ಇಲ್ಲಿನ ಲಿಸ್ಟ್ ಓದಿದ ಮೇಲೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು ಸಹಜ.

ನಮ್ಮ ಮನೆಯ ಕಿಟಕಿ, ಗೋಡೆ, ಗೋಡೆಯ ಸ್ಕರ್ಟಿಂಗ್, ಬೆಂಚು, ಸ್ಟೂಲು, ಟೇಬಲ್, ಹಗ್ಗ, ಇಟ್ಟಿಗೆ, ಬಟ್ಟೆಯ ಬೆಲ್ಟ್, ದಿಂಬು, ಕನ್ನಡಿ, ಖುರ್ಚಿ ಇತ್ಯಾದಿಗಳೇ ಐಯ್ಯಂಗಾರ್ ರು ಪರಿಚಯಿಸಿದ ಪ್ರಾಪ್ಸ್ ಗಳು ಅಂದರೆ ಯೋಗ ಸಲಕರಣೆಗಳು. ಇವುಗಳನ್ನು ಬಳಸಿ ದೇಹವನ್ನು ಹಿಗ್ಗಿಸುವ, ಹಿಂಭಾಗಿಸುವ, ಮುಂಭಾಗಿಸುವ, ತಿರುಚುವ, ಬ್ಯಾಲೆನ್ಸ್ ಮಾಡುವ ಸರಳ ಯೋಗಾಸನಗಳನ್ನು ಸಹಜ ಉಸಿರಾಟದೊಂದಿಗೆ ಖಂಡಿತವಾಗಿಯೂ ಎಲ್ಲರೂ ಸಹ ಮಾಡಬಹುದಾಗಿದೆ. ‘Stretch your body like a dog’ ಎನ್ನುವಂತೆ ಅಧೋಮುಖ ಶ್ವಾನಾಸನ, ಚಕ್ರಾಸನ, ವೃಕ್ಷಾಸನ, ಶೀರ್ಷಾಸನಗಳನ್ನು ಸುಲಭವಾಗಿ ಕಲಿಯಬಹುದಾಗಿದೆ. ದೇಹವನ್ನು ತಿರುಚಿ ಮಾಡುವ ಆಸನಗಳನ್ನು ಖುರ್ಚಿ ಬಳಸಿ ಮಾಡುತ್ತ ಹೋದಂತೆ ಪ್ಯಾಂಕ್ರಿಯಾಸ್ ಅಂದರೆ ಮೇದೋಜೀರಕ ಗ್ರಂಥಿಯು ಚುರುಕುಗೊಂಡು ನೈಸರ್ಗಿಕ ಇನ್ಸುಲಿನ್ ಉತ್ಪತ್ತಿಗೆ ತೊಡಗಿಕೊಂಡು ಸಕ್ಕರೆ ಕಾಯಿಲೆ (ಮಧುಮೇಹ) ಸಮಸ್ಯೆಯಿಂದ ಬಳಲುತ್ತಿರುವವರಿಗೆ ರೋಗ ಮುಕ್ತಿ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮನೆಯ ಕಿಟಿಕಿಗೋ ಅಥವಾ ಸೀಲಿಂಗ್ ನ ಕೊಕ್ಕೆಗೋ ಹಗ್ಗವನ್ನು ಹಾಕಿ ಆಸನಗಳ ರಾಜ ಎನಿಸಿಕೊಂಡಿರುವ ಶೀರ್ಷಾಸನವನ್ನು ಖುರ್ಚಿ, ಬೆಂಚು, ಗೋಡೆ ಬಳಸಿಕೊಂಡು ಅಸನಗಳ ರಾಣಿ ಎಂದು ಕರೆಸಿಕೊಳ್ಳುವ ಸರ್ವಾಂಗಾಸನವನ್ನು ಮಾಡಿ ಅಪಾರ ಲಾಭಗಳನ್ನು ಪಡೆದುಕೊಳ್ಳಬಹುದು. ಅನೇಕ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದಾಗಿದೆ.

‘ಆಸನೇನ ರುಜೋ ಹಂತಿ, ಪ್ರಾಣಾಯಾಮೇನ ಪಾತಕಮ್’ ಎಂಬ ಆರ್ಯವಾಣಿ ಹೇಳುವಂತೆ ಆಸನಗಳಿಂದ ರೋಗಗಳೂ, ಪ್ರಾಣಾಯಾಮದಿಂದ ಪಾಪಗಳೂ ನಿವಾರಣೆಯಾಗುತ್ತವೆ. ಎಲ್ಲದಕ್ಕೂ ನಂಬಿಕೆ ಶ್ರದ್ಧೆಗಳೇ ಮುಖ್ಯ ನಂಬಿಕೆಯೇ ದೇವರು ಎಂಬ ಸಾಲು ಇಲ್ಲಿ ಕೆಲಸ ಮಾಡುತ್ತದೆ. ಕಲಿಯುವ ಮನಸ್ಸು ಎಷ್ಟು ಎಂಬ ಸಾಲು ಇಲ್ಲಿ ಕೆಲಸ ಮಾಡುತ್ತದೆ. ಕಲಿಯುವ ಮನಸ್ಸು ಎಷ್ಟು ಮುಖ್ಯವೋ ಕಲಿಸುವ ಗುರು ಕೂಡ ಅಷ್ಟೇ ಬಹುಮುಖ್ಯ. ಸೂಕ್ತವಾದ ಗುರುವಿನ ಆಯ್ಕೆಯನ್ನು ಜಾಗೃತೆಯಿಂದ ಮಾಡಿಕೊಳ್ಳಿ, ಇಲ್ಲಿ ಹಣ ಮುಖ್ಯವಲ್ಲ. ಜ್ಞಾನ ಮುಖ್ಯ. ಅಯ್ಯಂಗಾರ್ ಬಳಿ ತರಬೇತಿ ಪಡೆದ ಹಲವರು ನಮ್ಮ ರಾಜ್ಯದಲ್ಲಿದ್ದಾರೆ. ಅಂತಹ ಗುರುಗಳ ಬಳಿ ನಿಮ್ಮ ಕಲಿಕೆ ಆರಂಭಿಸಿದಲ್ಲಿ ನಿಮ್ಮ ಸಮಸ್ಯೆಗಳು ಮಾಯವಾಗಿ ನಿಮ್ಮ ಮುಖದಲ್ಲಿ ಸುಂದರವಾದ ನಗು ಅರಳಬಹುದು.

ಬಿ.ಕೆ.ಎಸ್.ಅಯ್ಯಂಗಾರ್ ಅವರ ಗರಡಿಯಲ್ಲಿ ಪಳಗಿದ ಪುತ್ತೂರಿನ ಶ್ರೀ ಕರುಣಾಕರ್ ಗುರೂಜಿಯವರಿಗೆ ಯೋಗಕ್ಷೇತ್ರದಲ್ಲಿ 45 ವರ್ಷಗಳಿಗೂ ಹೆಚ್ಚಿನ ಅನುಭವವಿದೆ. ಅನುಭವ ಇರುವಲ್ಲಿ ಅಮೃತ ಇದೆ ಎನ್ನುವ ಮಾತಿನಂತೆ ಅವರ ಯೋಗ ತರಗತಿಯಲ್ಲಿ ಅವರು ಮಾತನಾಡುವ ಒಂದೊಂದು ಮಾತುಗಳು ಸಹ ಅವರ ಆಳವಾದ ಜ್ಞಾನವನ್ನು ಸಾಬೀತುಪಡಿಸುತ್ತವೆ. ಅತ್ಯಂತ ಸರಳರಾದ ಮೃದು ಸ್ವಭಾವ ಹಾಗೂ ಮಿತಭಾಷಿಗಳಾದ ಕರುಣಾಕರ್ ರವರ ಯೋಗ ತರಗತಿಗಳಲ್ಲಿ ಸಮಯ ಜಾರುವುದೇ ಗೊತ್ತಾಗುವುದಿಲ್ಲ. ಮತ್ತೆ ಮತ್ತೆ ಅವರ ಕ್ಲಾಸ್ ಗಳಿಗೆ ಹೋಗಬೇಕೆನಿಸುತ್ತದೆ. ಉಚಿತ ಯೋಗ ಶಿಬಿರಗಳಲ್ಲಿ ಜನ ಸೇರಿಸಿ ಸಂತೆ ಯೋಗ ಶಿಬಿರದಂತಲ್ಲ ಇವರ ಯೋಗ ಶಿಬಿರಗಳು. ಶಿಸ್ತು, ಸಮಯ ಪಾಲಿಸುವ ನಿಜವಾದ ಯೋಗ ಕಲಿಯಬೇಕೆನ್ನುವ ಉತ್ಕಟ ಇಚ್ಚೆ ಇರುವ ಆಸಕ್ತರಿಗಾಗಿ ಮಾತ್ರವೇ ಇವರ ಯೋಗ ಶಿಬಿರ. ಇನ್ನು ಅವರು ತೆಗೆದುಕೊಳ್ಳುವ ಯೋಗ ಚಿಕಿತ್ಸೆ (ಥೆರಪಿ)ಯಂತೂ ಅದ್ಬುತ. ವೈಯುಕ್ತಿಕ ಗಮನ ನೀಡಿ ಸರಳ ಆಸನಗಳ ಮೂಲಕ ಪರಿಹಾರ ಒದಗಿಸುವ ಪರಿಯಂತೂ ಆಶ್ಚರ್ಯಕರ.

ಲೇಖನ: ಯೋಗಾಚಾರ್ಯ ಅನಿಲಕುಮಾರ್. ಹೆಚ್.ಶೆಟ್ಟರ್
ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗಪಟು
ಕಣಾದ ಯೋಗ & ರಿಸರ್ಚ್ ಫೌಂಡೇಶನ್ (ರಿ)
ಶಿವಮೊಗ್ಗ. ಮೊ: 98866 74375

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...