alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಥೆರಪಿ- ಟ್ರೆಂಡ್

compositeProp200x200Hue

ಯೋಗ ಇಂದಿನ ಫ್ಯಾಷನ್ ಎನ್ನುವಷ್ಟರ ಮಟ್ಟಿಗೆ ದಾಪುಗಾಲಿನಲ್ಲಿ ಹೆಜ್ಜೆಯಿಡುತ್ತಿದ್ದರೆ ಯೋಗ ಥೆರಪಿಯು ಪ್ರಪಂಚದಾದ್ಯಂತ ಹೊಸ ಟ್ರೆಂಡ್ ಆಗಿ ಎಲ್ಲರನ್ನೂ ಯೋಗದತ್ತ ಸೆಳೆಯುತ್ತಿದೆ. ‘ಅವರವರ ಭಾವಕ್ಕೆ ತಕ್ಕಂತೆ ಅವರವರ ಭಕುತಿ’ ಎಂಬ  ಸರ್ವಜ್ಞನ ನುಡಿಯಂತೆ ಯೋಗವನ್ನು ಇಂದಿನವರು ತಮ್ಮ ಮೂಗಿನ  ನೇರಕ್ಕೆ ನೋಡುತ್ತ ಯೋಗವನ್ನು ತಮಗೆ ಅವಶ್ಯವಿರುವಷ್ಟನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ಕೆಲವರು ತಮ್ಮ ತೂಕವನ್ನು ತಗ್ಗಿಸಲು, ಇನ್ನು ಕೆಲವರು ವಯಸ್ಸನ್ನು ತಗ್ಗಿಸಲು, ಆರೋಗ್ಯವನ್ನು ಕಾಪಾಡಲು, ಅಂದ, ಚೆಂದ ಅಂದರೆ ಆಧುನಿಕ ಕನ್ನಡದಲ್ಲಿ ಫಿಗರ್ ಮೇಂಟೇನ್ ಮಾಡಿಕೊಳ್ಳಲು, ಒತ್ತಡದಿಂದ ಹೊರಬರಲು, ನೆಮ್ಮದಿ ಶಾಂತಿಯ ಕಾಣಲು, ಹೀಗೆ ನೂರಾರು ಜನ ಹತ್ತಾರು ರೀತಿಯಲ್ಲಿ ಯೋಗ ಮಾರ್ಗವನ್ನು ತಮ್ಮ ಮೂಗಿನ ನೇರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಋಷಿ ಮುನಿಗಳಿಗಷ್ಟೇ ಸೀಮಿತವಾಗಿದ್ದ, ಗುರುಕುಲ ಆಶ್ರಮಗಳಲ್ಲಿ ಮಾತ್ರವೇ ಕಾಣಬಹುದಾಗಿದ್ದ ಸನಾತನ ಯೋಗ ಇಂದು ಎಲ್ಲೆಡೆ ವ್ಯಾಪಿಸಿದೆ. ನಾನಾ ಹೆಸರುಗಳಲ್ಲಿ ರಾರಾಜಿಸುತ್ತಿದೆ. ಕಾರ್ಪೋರೇಟ್ ಯೋಗ, ಕಪಲ್ಸ್ ಯೋಗ, ಹಾಟ್ ಯೋಗ, ನೇಕೆಡ್ ಯೋಗ ಎಂಬ ಅಧ್ವಾನಗಳು, ಅಸಹ್ಯಗಳು ಯೋಗದ ಹೆಸರಿನಲ್ಲಿ ಯೋಗವನ್ನು ಕಲುಷಿತಗೊಳಿಸಿವೆ. ಇಷ್ಟೆಲ್ಲದರ ನಡುವೆಯೂ ಯೋಗ ಥೆರಪಿ ಎಂಬ ವಿಧಾನವು ಹೊಸ ಟ್ರೆಂಡ್ ಸೆಟರ್ ಆಗಿ ಭಾರಿ ಹವಾ ಎಬ್ಬಿಸಿದೆ.

ಯೋಗ ಥೆರಪಿ ಎಂದರೆ ಯೋಗ ಚಿಕಿತ್ಸೆ. ಸರ್ವೇ ಸಾಮಾನ್ಯ ಯೋಗಾಸನ ತರಗತಿಗಳಲ್ಲಿ ಇರುವಂತೆ ಇಲ್ಲಿ ಯಾವುದೇ ನಿರ್ದಿಷ್ಟ ಸಿಲೆಬಸ್ ಇರುವುದಿಲ್ಲ. ಮಂತ್ರಗಳ ಪಠನೆ ಮಾಡಬೇಕಿಲ್ಲ. ಭಜನೆ, ಯೋಗಗೀತೆಗಳನ್ನು ಹೇಳಬೇಕಿಲ್ಲ. ಡಾಕ್ಟರುಗಳ ಬಳಿಗೆ ನಾವು ಹೋದಾಗ, ನಮ್ಮ ಸಮಸ್ಯೆಗೆ ಇಂಜೆಕ್ಷನ್, ಟ್ಯಾಬ್ಲೆಟ್ಸ್, ಟಾನಿಕ್ಕು ಬರೆದುಕೊಟ್ಟು ಸೂಚಿಸಿದಂತೆ ನೀವು ಈ ಮೆಡಿಸಿನ್ ಗಳ ಕೋರ್ಸ್ ಕಂಪ್ಲೀಟ್  ಮಾಡಿದಲ್ಲಿ ಬೇಗ ಹುಷಾರಾಗುತ್ತೀರಿ. ಎಂದು ಎಲ್ಲ ವೈದ್ಯರುಗಳು ಹೇಳುವುದು ಸರ್ವೇ ಸಾಮಾನ್ಯವಷ್ಟೇ.

ಇಲ್ಲಿ ಅಂದರೆ ಯೋಗ ಥೆರಪಿಯಲ್ಲಿ ಯೋಗ ಥೆರಪಿಸ್ಟ್ ಗಳು ರೋಗಿಗಳ ಅಥವಾ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೌನ್ಸಿಲಿಂಗ್ ನಡೆಸಿ ಅವರವರ ಸಮಸ್ಯೆಗಳನ್ನಾಧರಿಸಿ ಕೆಲವು ನಿರ್ದಿಷ್ಟವಾದ ಆಸನಗಳನ್ನು ಪ್ರಾಣಾಯಾಮ ಪದ್ದತಿಯನ್ನು ಅಳವಡಿಸಿಕೊಳ್ಳಲು ಖುದ್ದಾಗಿ ತರಬೇತಿ ನೀಡುತ್ತಾರೆ. ಸಮಸ್ಯೆಗೆ ಮಾತ್ರವಲ್ಲದೇ ಸಮಸ್ಯೆಯ ಮೂಲಕ್ಕೆ ಯೋಗದ ಚಿಕಿತ್ಸೆ ನೀಡುವುದರಿಂದ ರೋಗಿಯು ತತ್ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಾಣಬಹುದಾಗಿದೆ.

ಮಾತ್ರೆಗಳನ್ನು ನುಂಗಿದಾಕ್ಷಣ ರಿಲೀಫ್ ಸಿಗುವಂತೆ, ಯೋಗ ಚಿಕಿತ್ಸೆಗೆ ಒಳಪಟ್ಟ ತಕ್ಷಣ ರಿಲೀಫ್ ಸಿಗುವುದಿಲ್ಲ. ಅಲೋಪತಿ ಪದ್ದತಿಯಲ್ಲಿ ಇನ್ಸ್ಟೆಂಟ್  ರಿಲೀಫ್ ಸಿಕ್ಕುತ್ತದೆ. ಆದರೆ ಯೋಗ ಥೆರಪಿಯ ಪದ್ದತಿಯಲ್ಲಿ ಪರ್ಮನೆಂಟ್ ಸಲ್ಯುಷನ್ ಸಿಕ್ಕುತ್ತದೆ. ಆದರೆ ಕಾಯಬೇಕಾಗುತ್ತದೆ. ಸಹನೆ, ಸಮಾಧಾನ, ತಾಳ್ಮೆಗಳನ್ನು ಒರೆಗೆ ಹಚ್ಚುವ ಯೋಗ ಥೆರಪಿಯಲ್ಲಿ, ದೈಹಿಕ ಮಾನಸಿಕ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರವಿದೆ. ಯೋಗ ಥೆರಪಿಯು ಶಾರೀರಿಕ, ಭಾವನಾತ್ಮಕ, ಆಧ್ಯಾತ್ಮಿಕ ಮಾನಸಿಕ ಆರೋಗ್ಯವನ್ನು ಸೃಷ್ಟಿಸಿ ಉದ್ದೀಪಿಸುತ್ತದೆ. ಯೋಗ ಚಿಕಿತ್ಸೆಯು ನಿರ್ದಿಷ್ಟ ಹಾಗೂ ಗುಣವಾಗದ ಅನಾರೋಗ್ಯಗಳಿಂದ ಬಳಲುತ್ತಿರುವವರಿಗೆ ಸಮೂಹ ತರಗತಿಯಲ್ಲಿ ಯೋಗಭ್ಯಾಸ ಮಾಡಿಸುವ  ಮೂಲಕ ಅವರ ಆರೋಗ್ಯವನ್ನು ಕಾಪಾಡುವ, ಸುಧಾರಿಸುವ ದೃಷ್ಟಿ ಹೊಂದಿದೆ ಎಂದು ಅಮೇರಿಕಾದ ಸಮತಾ ಯೋಗ ಸೆಂಟರ್ನ ಲ್ಯಾರಿಪೇನ್ ಅಭಿಪ್ರಾಯ ಪಡುತ್ತಾರೆ.

ಯೋಗ ಥೆರಪಿಯು ಆಧುನಿಕವಾಗಿ ರೂಪುಗೊಂಡಿರುವ ಒಂದು ವಿನೂತನ ಚಿಕಿತ್ಸಾ ಪದ್ದತಿಯಾಗಿದ್ದು, ಭಾರತೀಯ ಯೋಗದ ತಂತ್ರಗಳು ಮತ್ತು ಪ್ರಾಚೀನ ಋಷಿಮುನಿಗಳ, ವಿಜ್ಞಾನಿಗಳ ಪರಿಕಲ್ಪನೆಗಳು, ಇಂದಿನ ವೈದ್ಯಕೀಯ ಮನೋವೈಜ್ಞಾನಿಕ ಜ್ಞಾನ ತಂತ್ರಜ್ಞಾನಗಳ, ಕಲ್ಪನೆಗಳ ಕೂಸಾಗಿದ್ದು ಇದೀಗ ದಾಪುಗಾಲಿಡುತ್ತ ಬೆಳೆಯುತ್ತಿದೆ. ಈ ಮೊದಲೂ ಯೋಗ ಥೆರಪಿ ಇತ್ತು ಆದರೆ ಈಗ ಅದಕ್ಕೆ ಮಹತ್ವ ಬಂದಿದೆ. Old wine in new bottle ಎನ್ನುವಂತೆ ಆಧುನಿಕತೆಯ ಸ್ಪರ್ಷ ಪಡೆದಿದೆ. ಪ್ರಾಚೀನರ ವಿಜ್ಞಾನ ಮತ್ತು ಇಂದಿನ ವೈದ್ಯಕೀಯ ಜ್ಞಾನಗಳ ಕ್ರೋಢಿಕರಣದಂತಿರುವ ಈ ಯೋಗ ಚಿಕಿತ್ಸಾ ಪದ್ದತಿಯಲ್ಲಿ ಸಹ ಪರ-ವಿರೋಧಗಳಿಂದಾಗಿ, ಒಣ ಪ್ರತಿಷ್ಠೆಗಳಿಂದಾಗಿ ಸರ್ವಸಮ್ಮತ ಅಭಿಪ್ರಾಯ ಮೂಡಿ ಬಂದಿರುವುದಿಲ್ಲ. ಆದರೆ ಯೋಗಥೆರಪಿಯು ಇಂದು ಬೆಳೆಯುತ್ತಿರುವ ವೇಗ, ಯೋಗ ಥೆರಪಿಯಿಂದಾಗಿ ಗುಣಮುಖರಾಗಿರುವ ಸಹಸ್ರಾರು ಜನರ ಜೀವಂತ ಉದಾಹರಣೆಗಳು ಸರ್ವ ಜನರಲ್ಲಿ, ಶ್ರೀ ಸಾಮಾನ್ಯನೂ ಸಹ ಯೋಗ ಥೆರಪಿಯತ್ತ ಮುಖ ಮಾಡುವಂತಾಗಿದೆ.

ಯೋಗಾಚಾರ್ಯ : ಅನಿಲ್ ಕುಮಾರ್ ಹೆಚ್ ಶೆಟ್ಟರ್, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪುರಸ್ಕೃತರು

ಕಣಾದ ಯೋಗ & ರೀಸರ್ಚ್ ಫೌಂಡೇಶನ್ (ರಿ), ನಂ.9, ಸ್ಕಿನ್ ಟಚ್ ಯೋಗ ಶಾಪ್

3 ನೇ ಕ್ರಾಸ್ ದುರ್ಗಿಗುಡಿ, ಶಿವಮೊಗ್ಗ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...