alex Certify
ಕನ್ನಡ ದುನಿಯಾ       Mobile App
       

Kannada Duniya

ಬಾನಂಗಳದಲ್ಲಿ ಸಂಭವಿಸಲಿದೆ ‘ಖಗೋಳ ಚಮತ್ಕಾರ’

ಇದೇ ಜನವರಿ 31 ರಂದು ಸೂರ್ಯ ಮುಳುಗುತ್ತಿದ್ದಂತೆ ಪೂರ್ಣಚಂದ್ರ ಉದಯಿಸುತ್ತಾನೆ. ರಾತ್ರಿ ಭೂಮಂಡಲದಲ್ಲಿ ಖಗೋಳ ಚಮತ್ಕಾರವೊಂದು ನಡೆದು ಹೋಗುತ್ತದೆ. ಅದುವೇ ವರ್ಷದ ಪ್ರಥಮ ಚಂದ್ರಗ್ರಹಣ.

ಅಂದು ಚಂದಮಾಮನ ಕಣ್ಣಾಮುಚ್ಚಾಲೆ ಆಟವನ್ನು ನೋಡಲು ಮರೆಯುವಂತಿಲ್ಲ. ಅದು ವಿರಳಾತಿವಿರಳ ಪೂರ್ಣ ಚಂದ್ರಗ್ರಹಣ. ಅಷ್ಟೇ ಏಕೆ ಅದು ರೋಚಕ ಸೂಪರ್ ಮೂನ್ (ದೈತ್ಯ ಚಂದ್ರ) ಬ್ಲೂ ಮೂನ್ (ನೀಲಿ ಚಂದ್ರ) ಬ್ಲಡ್ ಮೂನ್ (ರಕ್ತ ಚಂದ್ರ).

ಒಂದೂವರೆ ಶತಮಾನದ ಹಿಂದೆ 1866 ರ ಮಾರ್ಚ್ 31 ರಂದು ಇಂಥದ್ದೇ ಘಟನೆಯೊಂದು ಜರುಗಿತ್ತು. ಈಗ ಮತ್ತೆ ಅದು ಮರುಕಳಿಸುತ್ತಿದೆ. ನಾವೆಲ್ಲ ಭಯದಿಂದ ಕಣ್ಮುಚ್ಚಿ ಕೂರದೆ ನೋಡಿ ಆನಂದಿಸಬೇಕಾಗಿದೆ. “ಗ್ರಹಣ” ಖಗೋಳದ ಸಹಜ ವಿದ್ಯಮಾನ. ಆಕಾಶ ಕಾಯಗಳ ನೆರಳು-ಬೆಳಕಿನಾಟ. ಚಂದ್ರ ಭೂಮಿಯ ಸುತ್ತ, ಭೂಮಿ ಸೂರ್ಯನ ಸುತ್ತ ನಿರಂತರ ಚಲಿಸುತ್ತಿರುವಾಗ ಒಂದಕ್ಕೊಂದು ಅಡ್ಡ ಬರುತ್ತದೆ.

ಭೂಮಿ, ಚಂದ್ರ ಮತ್ತು ಸೂರ್ಯ ಇವು ಒಂದೇ ಸರಳ ರೇಖೆಯ ಮೇಲೆ ಬಂದಾಗ ಭೂಮಿಯ ನೆರಳು ಸಂಪೂರ್ಣ ಚಂದ್ರನನ್ನು ಮರೆ ಮಾಡುತ್ತದೆ. ನೆರಳಿನೊಳಗಿನ ಚಂದ್ರ ಚಂದ್ರಗ್ರಹಣ, ಅಮಾವಾಸ್ಯೆಯ ದಿನ ಸೂರ್ಯಗ್ರಹಣ, ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುವುದು ವಾಡಿಕೆ. ಆದರೆ ಎಲ್ಲಾ ಅಮವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಗ್ರಹಣಗಳು ಸಂಭವಿಸುವುದಿಲ್ಲ. ಕಾರಣ ಸೂರ್ಯನ ಸುತ್ತಲಿನ ಭೂಮಿಯ ಪಥ, ಭೂಮಿಯ ಸುತ್ತಲಿನ ಚಂದ್ರನ ಪಥ ಒಂದೇ ಸಮತಳದಲ್ಲಿರದೆ ಅವು ಪರಸ್ಪರ ಐದು ಡಿಗ್ರಿಯಷ್ಟು ಓರೆಯಾಗಿವೆ.

ಸೂಪರ್ ಮೂನ್ : ಖಗೋಳ ವಿಜ್ಞಾನಿಗಳು ಅಧಿಕೃತವಾಗಿ ಯಾರೂ ಸೂಪರ್ ಮೂನ್ ಎಂಬ ಪದ ಬಳಸುವುದಿಲ್ಲ. 1979 ರಲ್ಲಿ ರಿಚರ್ಡ್ ನೋಲ್ ಎಂಬ ಜ್ಯೋತಿಷ್ಯ ಶಾಸ್ತ್ರಜ್ಞ ಹುಣ್ಣಿಮೆಯ ದೈತ್ಯ ಚಂದ್ರನನ್ನು ನೋಡಿ ಬೆರಗಾಗಿ ಸೂಪರ್ ಮೂನ್ ಎಂದು ಉದ್ಘಾರವೆತ್ತಿದ್ದ. ನಂತರ ಸೂಪರ್ ಮೂನ್ ಎಂಬ ಪದ ಬಳಕೆಗೆ ಬಂತು.

ಚಂದ್ರ ಭೂಮಿಯನ್ನು ವೃತ್ತಾಕಾರದಲ್ಲಿ ಸುತ್ತದೇ ಅಂಡಾಕಾರದಲ್ಲಿ ಸುತ್ತು ಹಾಕುತ್ತದೆ. ಈ ಸುತ್ತಾಟದ ಸಮಯದಲ್ಲಿ ಚಂದ್ರ ಒಮ್ಮೆ ಭೂಮಿಗೆ 362600 ಕಿ.ಮೀ. ದೂರದಲ್ಲಿದ್ದರೆ ಮತ್ತೊಮ್ಮೆ 405400 ಕಿಲೋ ಮೀಟರ್ ದೂರ ಹೋಗುತ್ತದೆ. ಚಂದ್ರ ಸಾಮೀಪ್ಯ ಬಿಂದುವಿಗೆ ಪೆರಿಗೀ ಎಂದು, ಚಂದ್ರ ಮಂದೋಚ್ಛ ಬಿಂದುವಿಗೆ ಅಪೋಗೀ ಎಂದು ಹೆಸರು.

ಪೆರಿಗೀ ಸಂದರ್ಭದಲ್ಲಿ ಮಾಮೂಲಿ ಚಂದ್ರನಿಗಿಂತ ಚಂದ್ರ ಶೇ. 14 ರಷ್ಟು ದೊಡ್ಡದಾಗಿ, ಶೇ.40 ರಷ್ಟು ಪ್ರಕಾಶಮಾನವಾಗಿ ಕಾಣುತ್ತಾನೆ. ಈ ದೈತ್ಯ ಚಂದ್ರನನ್ನು ಸೂಪರ್ ಮೂನ್ ಎನ್ನುತ್ತಾರೆ. ಜನವರಿ 31 ರಂದು ನಾವು ನೋಡುವುದು ಇದೇ ಸೂಪರ್ ಮೂನ್ ನನ್ನು. ನೀವು ದೂರದರ್ಶಕ ದುರ್ಬಿನಿನ ಮೂಲಕ ನೋಡಿದರೆ ಚಂದ್ರನ ದೈತ್ಯಾಕಾರ ವರ್ಣನಾತೀತ.

ಬ್ಲೂ ಮೂನ್ ಅಪರೂಪದ ಘಟನೆಗಳನ್ನು ‘Once in a Blue Moon’ ಎನ್ನುವುದು ಗಾದೆ. ಹವ್ಯಾಸಿ ಖಗೋಳ ವಿಜ್ಞಾನಿ ಜೇಮ್ಸ್ ಹೂ ಪ್ರುಯೆಟ್ 1946 ರಲ್ಲಿ ತಾನು ಬರೆದ ‘ ಆಕಾಶ ಮತ್ತು ದೂರದರ್ಶಕ’ ಎಂಬ ಲೇಖನದಲ್ಲಿ ಒಂದೇ ತಿಂಗಳಿನಲ್ಲಿ ಬಂದ ಎರಡು ಹುಣ್ಣಿಮೆಗಳನ್ನು ತಪ್ಪಾಗಿ ಗ್ರಹಿಸಿ ಪೂರ್ಣ ಚಂದ್ರ, ಸುಗ್ಗಿ ಚಂದ್ರ ಎಂದು ಸಂಬೋಧಿಸದೇ ಬ್ಲೂ ಮೂನ್ ಎಂದು ಬರೆದ. ಮುಂದೆ ಅದೇ ಪದ ಜನರ ಬಾಯಲ್ಲಿ ರೂಢಿ ಆಯಿತು.

ಎರಡು ಹುಣ್ಣಿಮೆಗಳ ಮಧ್ಯ 29.5 ದಿನಗಳಿರುತ್ತದೆ. ಅಂದರೆ ತಿಂಗಳಿಗೊಂದರಂತೆ ವರ್ಷಕ್ಕೆ ಹನ್ನೆರಡು ಹುಣ್ಣಿಮೆ ಸಂಭವಿಸುತ್ತದೆ. ಲೆಕ್ಕಾಚಾರದ ಪ್ರಕಾರ 2-3 ವರ್ಷಕ್ಕೊಮ್ಮೆ ಬ್ಲೂಮೂನ್ ಕಾಣಿಸಿಕೊಳ್ಳುತ್ತದೆ. ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದರೆ ಎರಡನೇ ಹುಣ್ಣಿಮೆಯೇ ಬ್ಲೂಮೂನ್ ಎಂದು ಕರೆಸಿಕೊಳ್ಳುತ್ತದೆ. ಉದಾಹರಣೆಗೆ 2018 ರ ಜನವರಿ ಒಂದನೇ ತಾರೀಖು ಹುಣ್ಣಿಮೆ ಸಂಭವಿಸಿತ್ತು. ಈಗ ಮತ್ತೆ ಇದೇ ಜನವರಿ 31 ರಂದು ಹುಣ್ಣಿಮೆ ಸಂಭವಿಸುತ್ತಿದೆ. ಇದನ್ನೇ ಬ್ಲೂಮೂನ್ ಎಂದು ಕರೆಯುತ್ತಾರೆ. 1550 ರಿಂದ 2650 ರ ಅವಧಿಯ 1100 ವರ್ಷಗಳಲ್ಲಿ 408 ಬ್ಲೂಮೂನ್ ಸಂಭವಿಸುತ್ತವೆಂದು ತಜ್ಞರು ಲೆಕ್ಕಾಚಾರ ಮಾಡಿದ್ದಾರೆ.

ಇನ್ನೊಂದು ಅರ್ಥದಲ್ಲಿ ಬ್ಲೂ ಮೂನ್ ಎಂದರೆ ಚಂದ್ರ ನೀಲಿ ಬಣ್ಣದಲ್ಲಿ ಕಾಣುವುದು. ವಾತಾವರಣದಲ್ಲಿ 0.7 ಮೈಕ್ರಾನ್ ಗಿಂತ ದೊಡ್ಡದಾಗಿರುವ ಅಧಿಕ ಸಂಖ್ಯೆಯ ಧೂಳಿನ ಕಣ, ಹೊಗೆ ಇದ್ದರೆ ಅವು ಕೆಂಬಣ್ಣವನ್ನು ಚದುರಿಸಿದಾಗ ಚಂದ್ರ ನೀಲಿ ಬಣ್ಣದಲ್ಲಿ ಗೋಚರಿಸುತ್ತಾನೆ. ಇದಕ್ಕೆ ಮೀ ಸ್ಕಾಟರಿಂಗ್ (Mie Scattering ) ಎನ್ನುತ್ತಾರೆ.

ಕಾಡಿಗೆ ಬೆಂಕಿ ಬಿದ್ದಾಗ, ಜ್ವಾಲಾಮುಖಿ ಸಂಭವಿಸಿದಾಗ ಧೂಳು ತುಂಬಿದ ಬಿರುಗಾಳಿ ಬೀಸಿದರೆ ಕೆಂಪು ಬಣ್ಣ ಚದರಿ ಚಂದ್ರ ಸಂಪೂರ್ಣ ನೀಲವರ್ಣದಲ್ಲಿ ಕಂಗೊಳಿಸುತ್ತಾನೆ. 1883 ರ ಕ್ರಕೋಟೊವಾ ಜ್ವಾಲಾಮುಖಿ, 1988 ರ ಸೇಂಟ್ ಹೆಲೆನ್ಸ್ ಜ್ವಾಲಾಮುಖಿಗಳ ಸಂದರ್ಭದಲ್ಲೂ ಚಂದ್ರ ನೀಲಿ ಬಣ್ಣದಲ್ಲಿ ಕಂಡ ದಾಖಲೆಗಳಿವೆ. ಈ ಘಟನೆಗಳು ಕೂಡ ವಿರಳಾತಿ ವಿರಳವೇ. ಇದನ್ನು ಕೂಡ ನಾವು “ಒನ್ಸ್ ಇನ್ ಎ ಬ್ಲೂಮೂನ್” ಎಂದು ಕರೆಯಬೇಕಾಗುತ್ತದೆ.

ಬ್ಲಡ್ ಮೂನ್ : ಪ್ರತಿದಿನ ಬೆಳ್ಳಗೆ ಮತ್ತು ಸಂಜೆ ಹಳದಿ, ಕೆಂಪು, ತಾಮ್ರ ವರ್ಣದ ಸೂರ್ಯವನ್ನು ನೋಡುತ್ತೇವೆ. ಸೂರ್ಯ ದಿಗಂತಕ್ಕೆ ಸಮೀಪದಲ್ಲಿದ್ದಾಗ ಚಿಕ್ಕ ತರಂಗ ದೂರವನ್ನು ಹೊಂದಿರುವ ಪ್ರೋಟಾನುಗಳು (ಧೂಳಿನ ಕಣ) ನೀಲಿ ಬೆಳಕನ್ನು ಚದರಿಸುತ್ತವೆ. ಆಗ ಕೆಂಬಣ್ಣದ ಸೂರ್ಯ ಕಾಣುತ್ತಾನೆ. ಕ್ರಿ.ಶ. 576 ರಲ್ಲಿ ಖಗೋಳ ತಜ್ಞ ಆರ್ಯಭಟ ಚಂದ್ರನ ಕಿತ್ತಳೆ, ತಾಮ್ರ ವರ್ಣಕ್ಕೆ ವಾತಾವರಣದ ಧೂಳಿನ ಕಣಗಳೇ ಕಾರಣವೆಂದು ಸ್ಪಷ್ಟಪಡಿಸಿದ್ದ.

ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರನ ಕಾಂತಿ ಸಂಪೂರ್ಣ ಕಡಿಮೆಯಾಗಿ ವಾತಾವರಣ ಫಿಲ್ಟರ್ ನಂತೆ ಬೆಳಕನ್ನು ವಿಭಜಿಸುತ್ತದೆ. ಆಗ ನೀಲಿ ಬೆಳಕು ಚದರಿ ಚಂದ್ರ ಕಿತ್ತಳೆ ವರ್ಣದಲ್ಲಿ ಶೋಭಿಸುತ್ತಾನೆ. ಚಂದ್ರ ಹೆಚ್ಚೆಚ್ಚು ರಕ್ತದ್ವರ್ಣದಲ್ಲಿ ಕಾಣುತ್ತಾನೆಂದರೆ ಪರಿಸರ ಮಾಲಿನ್ಯದಿಂದ ಧೂಳುಮಯವಾಗುತ್ತಿದೆ ಎಂಬುದೇ ಅರ್ಥ. ನಾಸಾ ವಿಜ್ಞಾನಿಗಳು ಈ ಗ್ರಹಣ ಸಂದರ್ಭ ಬಳಸಿ ಬಣ್ಣಗಳ ನಿಗೂಢಗಳನ್ನು ಪತ್ತೆ ಮಾಡುತ್ತಿದ್ದಾರೆ.

ಭೂಮಿಯ ಏಕೈಕ ಉಪಗ್ರಹ ಚಂದ್ರ ಸೌರಮಂಡಲದಲ್ಲಿ 5ನೇ ದೊಡ್ಡದು. 450 ಕೋಟಿ ವರ್ಷಗಳ ಹಿಂದೆ ಭೂಮಿ ಮತ್ತು ಮಂಗಳ ಗ್ರಹಗಳು ರೂಪುಗೊಂಡ ಮೇಲೆ ಅವುಗಳ ತ್ಯಾಜ್ಯದಿಂದ ರಚನೆ ಆಯಿತು. ಚಂದ್ರನಿಗೆ ಸ್ವಂತ ಬೆಳಕಿಲ್ಲ. ಸೂರ್ಯ ಪ್ರತಿಫಲಿತ ಬೆಳಕಲ್ಲಿ ಹೊಳೆಯುತ್ತಾನೆ. ಚಂದ್ರ ತನ್ನ ಸುತ್ತ ಸುತ್ತಲು, ಭೂಮಿಯ ಸುತ್ತ ಸುತ್ತಲು ಒಂದೇ ಅವಧಿ ತೆಗೆದುಕೊಳ್ಳುವುದರಿಂದ ಅದರ ಒಂದು ಮುಖವನ್ನು ಮಾತ್ರ ನಾವು ನೋಡಬಹದು.

1969 ರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಹಾಗೂ ನಂತರ ಇತರ ಐದು ಜನ ಖಗೋಳ ಯಾನಿಗಳು ಚಂದ್ರನ ಮೇಲೆ ಇಳಿದು ದಾಖಲೆ ಸ್ಥಾಪಿಸಿದರು. ಇಸ್ರೋ ಇತ್ತೀಚೆಗಷ್ಟೇ ಚಂದ್ರಯಾನದ ಮೂಲಕ ಚಂದ್ರನ ಮೇಲೆ ನೀರು ಇದೆ ಎಂದು ಶೋಧನೆ ಮಾಡಿದೆ. ಚಂದ್ರನ ಮೇಲೆ ಇಳಿಯುವ ನೂರಾರು ಯೋಜನೆಗಳು ಈಗ ಅಸ್ತಿತ್ವದಲ್ಲಿದೆ.

ಚಂದ್ರ ಪುರಾಣ ಕಾಲದಿಂದಲೂ ಸಾಹಿತ್ಯ ಮತ್ತು ಕಲೆಯ ಕಥಾವಸ್ತುವಾಗಿದ್ದಾನೆ. ಕಥೆ, ಕಾವ್ಯ ಸಂಗೀತ, ನಾಟಕ, ಶಿಲ್ಪಕಲೆಗಳಿಗೆ ಚಂದ್ರ ಸ್ಫೂರ್ತಿಯಾಗಿದ್ದಾನೆ. ಅರಿಸ್ಟಾಟಲ್ ನಿಂದ ಹಿಡಿದು ಇಂದಿನವರೆಗೂ ಚಂದ್ರ ಅಧ್ಯಯನದ ಪ್ರಮುಖ ವಸ್ತುವಾಗಿದ್ದಾನೆ. ಅಂಥ ಚಂದ್ರನ ಅದ್ಭುತ ಗ್ರಹಣದ ಅವತಾರಗಳನ್ನು ಜನವರಿ 2018 ರ ಬುಧವಾರ ಸಂಜೆ 6-22 ರಿಂದ 7-37 ರವರೆಗೆ ತಪ್ಪದೇ ವೀಕ್ಷಿಸಬೇಕಾಗಿದೆ. ಚಂದ್ರಗ್ರಹಣ ವೀಕ್ಷಿಸಲು ಕುತೂಹಲದ ಬರಿಗಣ್ಣಿದ್ದರೆ ಸಾಕು. ಗ್ರಹಣ ಅನಿಷ್ಟವೆಂಬ ವದಂತಿಯನ್ನು ನಂಬಬೇಡಿ, ಹಬ್ಬಿಸಬೇಡಿ. ಭೂಮಿಯ ಮೇಲೆ ನಡೆಯುವ ಯಾವುದೇ ಆಪತ್ತುಗಳಿಗೆ, ಅವಘಡಗಳಿಗೆ ಚಂದ್ರ-ಸೂರ್ಯರು ಕಾರಣವೇ ಅಲ್ಲ. ಈ ಸೂಪರ್ ಮೂನ್ ನೋಡಲು ತಪ್ಪಿಸಿಕೊಂಡರೆ ಮುಂದಿನ 2037 ರ ವರೆಗೆ ಕಾಯಬೇಕಾದೀತು.

ಲೇಖಕರು : ಡಾ. ಶೇಖರ್ ಗೌಳೇರ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...