alex Certify
ಕನ್ನಡ ದುನಿಯಾ       Mobile App
       

Kannada Duniya

ಭೂಲೋಕದ ಸ್ವರ್ಗ ನೌರ್ ದ್ವೀಪ ಅಧಃಪತನ ಆದದ್ದಾದರೂ ಹೇಗೆ..?

nauru island

ಸುಮಾರು ಇನ್ನೂರು ವರ್ಷಕ್ಕೂ ಹಿಂದೆ ಪೆಸಿಫಿಕ್ ಸಾಗರದ ಮಧ್ಯೆ ಎಂಟು ಚದರ ಮೈಲಿ ವಿಸ್ತಾರದಲ್ಲಿದ್ದ ಪುಟ್ಟ ದ್ವೀಪ ನೌರ್. ಅಲ್ಲಿನ ಜನರಿಗೆ ಕುಡಿಯಲು, ತಿನ್ನಲು ಯಾವುದಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿರಲಿಲ್ಲ. ಎಲ್ಲವೂ ಅವರಿಗೆ ದೈವದತ್ತವಾಗಿತ್ತು. ಆದರೂ ಅವರಿಗೆ ತಮ್ಮಲ್ಲಿರುವ ಸಂಪತ್ತಿನ ಬಗ್ಗೆ ಅರಿವೇ ಇರಲಿಲ್ಲ.

ಹೀಗಿರುವಾಗ ಒಂದು ದಿನ ಮಸಾಚುಸೆಟ್ಸ್ ನಿಂದ ಹೊರಟ ತಿಮಿಂಗಿಲ ಶಿಕಾರಿಯ ಹಡಗು ನೌರು ದ್ವೀಪಕ್ಕೆ ಬಂತು. ಬಾಯಾರಿಕೆಯಾದ್ದರಿಂದ ಹಡಗಿನ ಜನರು ನೌರ್ ದ್ವೀಪದಲ್ಲಿ ಹೇರಳವಾಗಿದ್ದ ಎಳೆನೀರನ್ನು ಕೊಯ್ಯಲು ಬಂದರು. ಹಿಂದೆಂದೂ ಹಡಗನ್ನು ನೋಡಿರದ ನೌರ್ ಜನ ಹಡಗಿಗೆ ಮುಗಿಬಿದ್ದರು. ಅಮಾಯಕ ನೌರ್ ಜನರನ್ನು ಕಂಡ ಹಡಗಿನವರು ಇಲ್ಲದ ಆಸೆ ತೋರಿಸಿ ನೌರ್ ಜನರನ್ನು ವಂಚಿಸಿ ಹಡಗಿನ ತುಂಬ ಎಳೆನೀರು ಒಯ್ದರು. ಅಲ್ಲಿಂದ ಆರಂಭವಾಯ್ತು ನೌರ್ ದ್ವೀಪದ ಸುಲಿಗೆ.

ಪಾಸ್ಫೇಟ್ ನಿಕ್ಷೇಪದ ತವರು

ಆಸ್ಟ್ರೇಲಿಯಾದ ಫೆಸಿಫಿಕ್ ಐಲೆಂಡ್ ಕಂಪನಿಯ ನಾವಿಕ ಒಮ್ಮೆ ನೌರ್ ದ್ವೀಪದಲ್ಲಿ ಮುರಿದು ಬಿದ್ದ ಕಲ್ಲು ಅಮೃತ ಶಿಲೆಯೆಂದು ತಿಳಿದು ಅದನ್ನು ಸಿಡ್ನಿ ಬಂದರಿಗೆ ತಂದ. ಆದರೆ ಆ ಕಲ್ಲನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿದಿದ್ದರೆ ಬಹುಶಃ ನೌರ್ ದ್ವೀಪ ತನ್ನ ಶ್ರೀಮಂತಿಕೆಯನ್ನು ಉಳಿಸಿಕೊಳ್ಳುತ್ತಿತ್ತೇನೋ..

ಕೆಲ ಕಾಲದ ನಂತರ ರಸಾಯನ ಶಾಸ್ತ್ರಜ್ಞನೊಬ್ಬ ಆ ಕಲ್ಲನ್ನು ಪರೀಕ್ಷಿಸಿದಾಗ ಅದರಲ್ಲಿ ಪ್ರತಿಶತ ತೊಂಬತ್ತಕ್ಕೂ ಹೆಚ್ಚು ಪಾಸ್ಫೇಟ್ ಇರುವುದು ತಿಳಿದುಬಂತು. ತಡಮಾಡದ ಪೆಸಿಫಿಕ್ ಕಂಪನಿಯವರು ಜರ್ಮನ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ನೌರ್ ದ್ವೀಪದಲ್ಲಿ ಗಣಿ ಕೆಲಸ ಆರಂಭಿಸಿಯೇಬಿಟ್ಟರು. ಜರ್ಮನ್ನರು, ಆಸ್ಟ್ರೇಲಿಯನ್ನರು ನೌರ್ ದ್ವೀಪವನ್ನು ಅವ್ಯಾಹತವಾಗಿ ದೋಚಿದರು. ನೌರ್ ದ್ವೀಪದ ವಾಸಿಗಳಿಗೆ ಗಣಿಗಾರಿಕೆಯಲ್ಲಿ ಕೆಲಸ ಕೊಡಲಾಯ್ತು.

ನೋಡನೋಡುತ್ತಿದ್ದಂತೆ ನೌರ್ ದ್ವೀಪದಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿದವು. 1968ರಲ್ಲಿ ನೌರ್ ಪ್ರಜಾಪ್ರಭುತ್ವ ರಾಷ್ಟ್ರವೆಂದು ಘೋಷಣೆಯಾಯಿತು. ಬರಿಯ ಪಾಸ್ಫೇಟ್ ರಫ್ತಿನಿಂದಲೇ ಒಂದು ಬಿಲಿಯನ್ ಗಿಂತಲೂ ಹೆಚ್ಚು ಹಣವನ್ನು ನೌರ್ ಸರಕಾರ ಬಾಚಿತ್ತು. ಇಲ್ಲಿನ ಜನರು ಯಾವುದಕ್ಕೂ ತೆರಿಗೆ ಕಟ್ಟಬೇಕಾಗಿರಲಿಲ್ಲ. ಶಿಕ್ಷಣ, ವೈದ್ಯಕೀಯ, ಮನೆ ಎಲ್ಲ ವೆಚ್ಚವನ್ನೂ ಸರಕಾರವೇ ಭರಿಸುತ್ತಿತ್ತು.

ಕಾಡುವ ಅನಾರೋಗ್ಯ

ಹೊರ ದೇಶಗಳ ಜನರ ದಬ್ಬಾಳಿಕೆಯಿಂದ ನೌರ್ ಜನರ ಜೀವನಶೈಲಿ, ಆಹಾರ ಎಲ್ಲವೂ ಬದಲಾಯ್ತು. ತಮ್ಮ ದೈನಂದಿನ ಆಹಾರವನ್ನು ಬಿಟ್ಟು ಆಮದು ಆಹಾರವನ್ನು ಉಪಯೋಗಿಸಲು ಆರಂಭಿಸಿದರು. ಪ್ರತಿ ಹತ್ತು ಜನರಲ್ಲಿ ಒಂಬತ್ತು ಮಂದಿ ವಿಪರೀತ ದಢೂತಿ ಶರೀರದವರಾದರು. ಇದರಿಂದ ಎಪ್ಪತ್ತು, ಎಂಬತ್ತು ವರ್ಷ ಬದುಕುತ್ತಿದ್ದ ನೌರ್ ಜನರು ಕೇವಲ 50 ರ ಆಸುಪಾಸಲ್ಲೇ ಸಾವನ್ನಪ್ಪಿದರು. ಸಿಹಿಮೂತ್ರ ರೋಗದಲ್ಲಿ ನೌರ್ ದೇಶ, ಜಗತ್ತಿನಲ್ಲೇ ಮೊದಲ ಸ್ಥಾನಕ್ಕೆ ಬಂತು. ಇತ್ತ ಸ್ವಾವಲಂಬನೆಯ ಬದುಕನ್ನು ತೊರೆದ ನೌರ್ ಜನ ದುರ್ಬಲರಾಗುತ್ತಿದ್ದಂತೆ ಅತ್ತ ಪಾಸ್ಫೇಟ್ ಅಗೆದು ಅಗೆದು ನೌರ್ ದ್ವೀಪ ಕೂಡ ಬಿಳಚಿಕೊಂಡು ಸುಣ್ಣದ ಕಲ್ಲಿನಂತೆ ಬಂಜರಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...