alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನ ಉಡುಪಿ ಹೋಟೆಲ್ ಆರಂಭದ ಕಥೆ….

ತಮ್ಮ ತಂದೆಯ ಹಠಾತ್ ಸಾವಿನ ಬಳಿಕ ದಯಾ ನಾಯಕ್ ಜೀವನೋಪಾಯಕ್ಕಾಗಿ ಕರ್ನಾಟಕದ ಉಡುಪಿ ಜಿಲ್ಲೆಯ ಮನೆ ತೊರೆದರು. ಆಗ ಅವರ ವಯಸ್ಸು 13. ಕೆಲಸಕ್ಕೆಂದು ಮುಂಬೈ ಸೇರಿದ ಅವರಿಗೆ ಆಹಾರ, ಸೂರು, ಬೆಂಬಲ ನೀಡಿದ್ದು ಉಡುಪಿ ರೆಸ್ಟೋರೆಂಟ್‌.

ಪೊಲೀಸ್ ಪಡೆಗೆ ಸೇರುವ ತನಕವೂ ಅವರು ಹೊಟೇಲ್‌ನಲ್ಲೇ ಆಶ್ರಯ ಪಡೆದಿದ್ದರು. ಅದೇ ದಯಾ ನಾಯಕ್ ಮುಂದೆ 80ಕ್ಕೂ ಹೆಚ್ಚು ಅಂಡರ್‌ವರ್ಲ್ಡ್‌ನ ಪಾತಕಿಗಳನ್ನು ಹೊಡೆದುರುಳಿಸಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎನಿಸಿಕೊಂಡರು. “ಇಂದು ಕೂಡಾ ನಾನು ಒಂದು ಕೈಯಲ್ಲಿ ಐದು ಗ್ಲಾಸ್ ಹಿಡಿದುಕೊಳ್ಳಬಲ್ಲೆ” ಎನ್ನುವ ನಾಯಕ್ ಅಂಧೇರಿಯ ವರ್ಸೋವಾದ ತಮ್ಮ ಉಡುಪಿ ಹೊಟೇಲ್ ಬದುಕಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಮುಂಬೈ ಮಂದಿಗೆ ಉಡುಪಿ ಹೊಟೇಲ್‌ಗಳ ದೋಸೆ, ಇಡ್ಲಿ, ಮೆದು ವಡೆಯ ರುಚಿ ಹತ್ತಿದೆ. ಈ ಹೊಟೇಲ್‌ಗಳ ಮುಂದೆ ಭಾರೀ ಜನಸಂದಣಿಯೂ ಸಾಮಾನ್ಯವಾಗಿದೆ. ಬೆಳಗ್ಗೆ 7 ಗಂಟೆಗೆ ತೆರೆಯುವ ಈ ಹೊಟೇಲ್‌ಗಳು ದಿನಪೂರ್ತಿ ಕಾರ್ಯಾಚರಿಸಿ ರಾತ್ರಿ 10.30ರ ವೇಳೆಗೆ ಬಾಗಿಲು ಹಾಕುತ್ತವೆ.

ಉಡುಪಿ ರೆಸ್ಟೋರೆಂಟ್ ಸರಣಿಯ ಕಥೆ ಆರಂಭವಾಗುವುದು 1920ರಲ್ಲಿ. 11 ವರ್ಷದ ರಾಮ ನಾಯಕ್ ಉಡುಪಿಯಿಂದ ಮುಂಬೈಗೆ ವಲಸೆ ಬರುತ್ತಾರೆ. ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರುವ ಅವರು ತರಕಾರಿ ಕತ್ತರಿಸುವುದು, ರೋಟಿ ಮಾಡುವ ಕೆಲಸ ಕಲಿತುಕೊಳ್ಳುತ್ತಾರೆ.

1930ರ ದಶಕದಲ್ಲಿ ತಮಿಳರು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಸೆಂಟ್ರಲ್ ಮುಂಬೈನ ಮಾತುಂಗದಲ್ಲಿ ತಮ್ಮದೇ ಸ್ವಂತ ಸ್ಟಾಲ್ ತೆರೆದು ದೋಸೆ, ಇಡ್ಲಿ ಮಾರತೊಡಗುತ್ತಾರೆ ರಾಮ ನಾಯಕ್. 1942ರಲ್ಲಿ ಅವರು ಉಡುಪಿ ಶ್ರೀಕೃಷ್ಣ ಹೆಸರಿನ ಹೊಟೇಲ್ ತೆರೆಯುತ್ತಾರೆ. ಅದು ಮುಂಬೈನ ಪ್ರಥಮ ಉಡುಪಿ ಹೊಟೇಲ್ ಎನಿಸಿಕೊಂಡಿದೆ.

ವರ್ಷಗಳು ಕಳೆದಂತೆ, ಶಾಲೆ ತೊರೆದವರು, ಉದ್ಯೋಗಕ್ಕಾಗಿ ವಲಸೆ ಬಂದವರಿಗೆ ಈ ಉಡುಪಿ ಹೊಟೇಲ್‌ಗಳು ಆಸರೆಯಾಗತೊಡಗಿದವು. ನಿರ್ದೇಶಕ ಸಂದೀಪ್ ಮೋದ್ ತಮ್ಮ ಮರಾಠಿ ಚಿತ್ರ ಚುಂಬಕ್‌ನಲ್ಲಿ ಉಡುಪಿ ಹೊಟೇಲ್‌ಗಳ ಈ ವಲಸಿಗರ ಕಥೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...