alex Certify
ಕನ್ನಡ ದುನಿಯಾ       Mobile App
       

Kannada Duniya

ಕರಗಿದ ಉಕ್ಕಿನ ಮಹಿಳೆ ಜೇನು ಸವಿದಾಗ….

irom sharmila 3344

“ಪರಿಸ್ಥಿತಿ ನನ್ನನ್ನು ತುಂಬ ಬದಲಾಯಿಸಿದೆ. ನನ್ನ ಸುತ್ತ ಈಗ ಕೆಲವು ಸಂಕೋಲೆಗಳು, ಮುಂಬರುವ ದಿನಗಳ ಕನಸುಗಳ ಹೊರತಾಗಿ ಬೇರೇನೂ ಇಲ್ಲ. ಇಲ್ಲಿ ನನಗೇನೂ ಕೊರತೆ ಇಲ್ಲ ಆದರೆ ಅನೇಕ ಜನರ ಕೊರತೆ ನನ್ನ ಕಣ್ಣಿಗೆ ಕಾಣಿಸುತ್ತಿದೆ” ಇದು ಮಣಿಪುರದ ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಐರನ್ ಲೇಡಿ ಖ್ಯಾತಿಯ ಇರೋಮ್ ಶರ್ಮಿಳಾ ಅವರ ಮನದಾಳದ ಮಾತು. ಮಣಿಪುರದಲ್ಲಿ ಸಶಸ್ತ್ರ ಪಡೆಗೆ ನೀಡಲಾಗಿರುವ ವಿಶೇಷಾಧಿಕಾರ  (ಅಫ್ ಸ್ಪಾ) ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ 16 ವರ್ಷದಿಂದ ಉಪವಾಸ ನಿರತ ಹೋರಾಟಗಾರ್ತಿಯ ದಿಟ್ಟ ಮಾತು.

ಹೋರಾಟದ ಮಜಲು

ಮಣಿಪುರಕ್ಕೆ ಸಂಬಂಧಿಸಿದ ಸಶಸ್ತ್ರದಳದ ವಿಶೇಷಾಧಿಕಾರ ಕಾನೂನನ್ನು ತೊಡೆದುಹಾಕಬೇಕು. ಇದರಿಂದ ಅನೇಕ ಮುಗ್ಧ ಜೀವಿಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ ಎಂಬ ಇವರ ವಾದವೇ ಇವರಿಗೆ ಮುಳ್ಳಾಯ್ತು. ಕೇವಲ 28 ವರ್ಷದ ಶರ್ಮಿಳಾ ತನ್ನೆಲ್ಲ ಆಸೆ, ಕನಸುಗಳನ್ನು ತೊರೆದು 2000ನೇ ಇಸವಿಯ ನವೆಂಬರ್ 5 ರಂದು ಹೋರಾಟದ ಹಾದಿ ತುಳಿದಿದ್ದರು. ಅಂದಿನಿಂದ ಆರಂಭವಾದ ಇವರ ಹೋರಾಟ ಆಗಸ್ಟ್ 9, 2016ರಂದು ಅಂತ್ಯವಾಯ್ತು. ತನ್ನ ಮನೋಸ್ಥೈರ್ಯದಿಂದಲೇ ಸತತ 16 ವರ್ಷಗಳ ಕಾಲ ಉಪವಾಸ ಮಾಡಿ ವಿಶ್ವದ ಸುದೀರ್ಘ ಉಪವಾಸಕ್ಕೆ ಮುಕ್ತಾಯ ಹಾಡಿದರು. ಸರಕಾರದ ನೀತಿಗೆ ತಿರುಗಿ ಬಿದ್ದು ಇಷ್ಟು ವರ್ಷ ಶಿಕ್ಷೆ ಅನುಭವಿಸಿದ್ದವರು ಬೇರೆ ಯಾರಿದ್ದಾರೆ ಹೇಳಿ…

ಗಾಂಧೀಜಿಯವರಂತೆ ನಾನೂ ಆಮರಣ ಉಪವಾಸದಲ್ಲಿ ತೊಡಗುತ್ತೇನೆ. ಗಾಂಧೀಜಿಯವರಿಗೆ ಉಪವಾಸಕ್ಕೆ ಇದ್ದ ಸ್ವಾತಂತ್ರ್ಯವನ್ನು ನನಗೂ ಕೊಡಿ ಎಂಬ ಇವರ ಕೂಗು ಬಹುಶಃ ಯಾರೊಬ್ಬರಿಗೂ ಕೇಳಲಿಲ್ಲ. ಇವರ ಉಪವಾಸ ಆತ್ಮಹತ್ಯೆಯ ನಾಟಕ ಎಂದ ಸರ್ಕಾರ ಇವರನ್ನು ಕಾನೂನು ವಶಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿತು. ವರ್ಷಗಳು ಉರುಳಿದಂತೆ ಶರ್ಮಿಳಾ ಅವರ ಶಿಕ್ಷೆಯ ಅವಧಿ ಹೆಚ್ಚುತ್ತಿತ್ತೇ ಹೊರತು ಅವರ ಆಗ್ರಹಗಳಿಗೆ ಉತ್ತರ ಸಿಗಲಿಲ್ಲ. ಆಹಾರ ಸೇವಿಸುವುದಿಲ್ಲ ಎಂಬ ಕಾರಣಕ್ಕೆ ಬಲವಂತವಾಗಿ ಮೂಗಿನ ನಳಿಗೆಯ ಮೂಲಕ ಆಹಾರ ನೀಡಲಾಯ್ತು. ಹಲವು ಬಾರಿ ಜೈಲಿನಿಂದ ಬಿಡುಗಡೆಗೊಂಡ ಶರ್ಮಿಳಾ ಅವರಿಗೆ ಕೊನೆಗೆ ಆಸ್ಪತ್ರೆಯೇ ಜೈಲಾಯ್ತು. 15 ಅಡಿ ಅಗಲ, 10 ಅಡಿ ಉದ್ದದ ಆ ಕೋಣೆಯಲ್ಲಿನ ಅವರ ಕೂಗು ಹೊರಜಗತ್ತಿಗೆ ಕೇಳುವುದಾದರೂ ಹೇಗೆ?

ಕೊನೆಗೂ ಸಿಗದ ಫಲ

ಸೇನೆಯ ವಿಶೇಷಾಧಿಕಾರ ಕಾನೂನು ರದ್ದಾಗುವ ತನಕ ತಲೆಗೂದಲು ಬಾಚುವುದಿಲ್ಲ, ಉಗುರು ಕತ್ತರಿಸುವುದಿಲ್ಲ ಹಾಗೂ ಮನೆಗೂ ಮರಳುವುದಿಲ್ಲ ಎಂದು ಶರ್ಮಿಳಾ ಪ್ರತಿಜ್ಞೆ ಮಾಡಿದ್ದರು. ಇವರಿಗೆ 16 ವರ್ಷ ತನ್ನ ಮನೆಯವರೊಂದಿಗೆ ಯಾವುದೇ ರೀತಿಯ ಸಂಪರ್ಕವಿರಲಿಲ್ಲ. ಇವರ ತಾಯಿ ಕೂಡ ಮಗಳನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಲಿಲ್ಲ. “ನನ್ನ ಗುರಿ ಮುಟ್ಟಿದೊಡನೆ ನಾನು ಡೆಸ್ಮೆಂಟ್ ಅವರನ್ನು ಮದುವೆಯಾಗುತ್ತೇನೆ” ಎಂದಿದ್ದರು ಶರ್ಮಿಳಾ. ಆಸ್ಪತ್ರೆಯಲ್ಲಿ ಇರುವಾಗ ಡೆಸ್ಮೆಂಟ್ ಅವರು ಕೊಟ್ಟ ಅನೇಕ ಪುಸ್ತಕಗಳೇ ಇವರ ಸಂಗಾತಿಗಳಾಗಿದ್ದವು. ಶರ್ಮಿಳಾ ಅವರು ಡೆಸ್ಮೆಂಟ್ ಅವರನ್ನು ಮದುವೆಯಾಗುವುದಕ್ಕೂ ಕೂಡ ಹಲವರ ವಿರೋಧ ಇದೆ.

ಆಗಸ್ಟ್ 9 ರಂದು ತಮ್ಮ ಸತ್ಯಾಗ್ರಹಕ್ಕೆ ಮುಕ್ತಾಯ ಹಾಡಿ ಜೇನುತುಪ್ಪ ಸವಿದ ಐರನ್ ಲೇಡಿ ತುಂಬ ಭಾವುಕರಾದರು. ತನ್ನ ಇಷ್ಟು ವರ್ಷದ ಹೋರಾಟಕ್ಕೆ ಯಾವುದೇ ಪ್ರತಿಫಲ ದೊರೆಯದೇ ಇದ್ದುದು ಅವರಿಗೆ ಭರಿಸಲಾಗದ ನೋವುಂಟು ಮಾಡಿದೆ. “ನನ್ನ ಸುದೀರ್ಘ ಹೋರಾಟಕ್ಕೆ ಯಾವುದೇ ಫಲ ದೊರೆಯಲಿಲ್ಲ. ನಾನು ನನ್ನ ಹೋರಾಟದ ಹಾದಿಯನ್ನೇ ಬದಲಿಸಿದ್ದೇನೆ. ಚುನಾವಣೆಗೆ ಸ್ಪರ್ಧಿಸಿ ಮಣಿಪುರದ ಸಿಎಂ ಆಗುವ ಆಸೆ ಇದೆ. ಅಧಿಕಾರ ಬಂದ ನಂತರ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ರದ್ದುಪಡಿಸುತ್ತೇನೆ” ಎನ್ನುತ್ತಾರೆ ಉಕ್ಕಿನ ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...