alex Certify ಸಂಬಂಧಗಳು ಬಿರುಕು ಬಿಡುತ್ತಿರಲು ಕಾರಣವೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಗಳು ಬಿರುಕು ಬಿಡುತ್ತಿರಲು ಕಾರಣವೇನು ಗೊತ್ತಾ…..?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ ಗೊತ್ತಿಲ್ಲ ಆ ಕ್ಷಣಕ್ಕೆ ನನ್ನ ಮನಸ್ಸು ಅವಳನ್ನು ಮಾತನಾಡಿಸುವ ಇಚ್ಛೆ ವ್ಯಕ್ತಪಡಿಸಲಿಲ್ಲ. ಬದಲಾಗಿ ತಲೆಮರೆಸಿಕೊಂಡಿತು.

ಎಷ್ಟೋ ಬಾರಿ ಹೀಗೆ ಆಗುತ್ತದೆ. ಆ ಕ್ಷಣಕ್ಕೆ ಆ ಸಂಬಂಧ ಬೇಡವೆನಿಸಿಬಿಡುತ್ತದೆ. ಅವರ ಸಾಮೀಪ್ಯ ಬೇಕೆನಿಸುವುದಿಲ್ಲ. ಅವರು ಗೆಳೆಯರೇ ಇರಬಹುದು ಅಥವಾ ಸಂಬಂಧಿಗಳೇ ಆಗಿರಬಹುದು.

ದಿನ ಬೆಳಗಾದರೆ ಫೇಸ್ ಬುಕ್, ವಾಟ್ಸಾಪ್ ಎಂದು ಗಂಟೆಗಟ್ಟಲೆ ಹತ್ತಾರು ಜನರ ಜೊತೆ ಮಾತುಕತೆ ನಡೆಸುವವರು, ತಮ್ಮ ಆತ್ಮೀಯರು ಎದುರಿಗೆ ಬಂದಾಗ ಪ್ರೀತಿಯಿಂದ ನಾಲ್ಕು ಮಾತನಾಡುವುದಿಲ್ಲ. ಮೊಬೈಲ್ ನಲ್ಲಿ ಯಾವುದೋ ಆಪ್ ಫ್ರೀ ಸಿಕ್ಕಿದರೆ ಗಂಟೆಗಟ್ಟಲೆ ಹರಟುವವರು ಎದುರಿಗೆ ಸಿಕ್ಕರೂ ನಮ್ಮನ್ನು ಗುರುತಿಸದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಇದು ಅವರವರ ಮನಃಸ್ಥಿತಿ ಎನ್ನಬೇಕೋ ಅಥವಾ ಸಂಬಂಧಗಳ ಬಗ್ಗೆ ಅವರಿಗಿರುವ ನಿರಾಸಕ್ತಿ ಎನ್ನಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಹೊತ್ತು ಹಸನಾಗಿರುವ ಸಂಬಂಧ ನಾಳೆಯೋ, ನಾಡಿದ್ದೋ ಹಳಸಬಹುದು.

ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಯೋಚಿಸಿ….!

ಇದು ಕಣ್ಣೆದುರಿಲ್ಲದ ಸಂಬಂಧಗಳ ಮಾತಾಯಿತು. ಇನ್ನು ಕಣ್ಣೆದುರೇ ಇರುವ ಸಂಬಂಧಗಳ ವಿಷಯಕ್ಕೆ ಬರೋಣ. ಬೇಕೋ ಬೇಡವೋ ಅಮ್ಮನ ಮಡಿಲಲ್ಲಿ ಕಣ್ತೆರೆದ ಕ್ಷಣದಿಂದ ಒಂದೊಂದೇ ಸಂಬಂಧಗಳು ಮನುಷ್ಯನನ್ನು ಸುತ್ತಿಕೊಳ್ಳುತ್ತಾ ಹೋಗುತ್ತದೆ. ಬೆಳೆದು ದೊಡ್ಡವರಾಗುತ್ತಿದ್ದಂತೆ ಕೆಲವು ಸಂಬಂಧಗಳು, ಮದುವೆ ಆದ ಮೇಲೆ ಮತ್ತಷ್ಟು ಸಂಬಂಧಗಳು ಹೀಗೆ ದಿನೇ ದಿನೇ ಪರಿಚಯದವರು, ಸಂಬಂಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಳೆಯ ಸಂಬಂಧಗಳ ಸಮಾಧಿಯ ಮೇಲೆ ಹೊಸ ಸಂಬಂಧ ಚಿಗುರೊಡೆಯುತ್ತದೆ.

ಮಗಳ ಮುಖ ನೋಡಿದಾಗ ಅರಳುವ ಮುಖ, ಸೊಸೆ ನೋಡಿದಾಗ ಇಲ್ಲವಾಗುತ್ತದೆ. ಇನ್ನು ಸೊಸೆಗೆ, ಅಮ್ಮನ ಮೇಲೆ ಉಕ್ಕುವ ಪ್ರೀತಿ, ಮಮತೆಯ ಹೊಳೆ ಅತ್ತೆಯ ಮೇಲೆ ಪ್ರವಹಿಸುವುದಿಲ್ಲ. ಮದುವೆಗೂ ಮುನ್ನ ಇಷ್ಟವಾಗುವ ತಮ್ಮ, ಮದುವೆಯಾದ ನಂತರ ದೂರವಾಗುತ್ತಾನೆ. ಏಕೆ ಹೀಗೆ? ಎಲ್ಲೋ ದೂರದಲ್ಲಿ ಇರುವ ಪ್ರೀತಿಯನ್ನು ಹೇಳಿಕೊಂಡು ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಹೀಗಿದ್ದರೆ ಎಷ್ಟು ಸುಖವಾಗಿರಬಹುದಿತ್ತು ಎಂದು ಹಂಬಲಿಸುವ ಬದಲು ನಮ್ಮಲ್ಲೇ ಇರುವ ಪ್ರೀತಿಯನ್ನೇ ಏಕೆ ಪೋಣಿಸಬಾರದು? ಅಸೂಯೆಯೆಂಬ ಕೋಟೆಯನ್ನೊಡೆದು ಪ್ರೀತಿಯ ಲತೆಯನ್ನು ಹರಡಲು ಸಾಧ್ಯವಿಲ್ಲವೇ? ಬೇರೆ ಬೇರೆ ಗ್ರಹಗಳಿಗೆ ಹೋಗಿ ಸಂಶೋಧನೆ ಕೈಗೊಳ್ಳುವಷ್ಟು ಮುಂದೆ ಬಂದಿರುವ ನಾವು, ಹತ್ತಿರದಲ್ಲೇ ಇರುವವರನ್ನು ಮಾತನಾಡಿಸಲು, ಅವರಿಗೆ ಕೈಲಾದ ಸಹಾಯ ಮಾಡಲು ಅಸಹಾಯಕರಾಗಿದ್ದೇವೆ. ಇದು ವಾಸ್ತವವೋ ಅಥವಾ ಇದೇ ವಾಸ್ತವವೆಂಬ ಭ್ರಮೆಯಲ್ಲಿ ನಾವಿದ್ದೇವೋ…?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...