alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ‘ಗೊಂಬೆ ಹಬ್ಬ’

ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ ದರ್ಬಾರು.  ಅಂದ ಚೆಂದದ ಗೊಂಬೆಗಳದ್ದೇ ಕಾರುಬಾರು. ದಸರಾ ಹಬ್ಬದ ವಿಶೇಷವಾಗಿರುವ ಗೊಂಬೆಗಳು ಸೃಜನಶೀಲತೆಯ ಸಂಕೇತ. ಸೃಜನಶೀಲತೆಗೆ ಆದರ ನೀಡುವ ಈ ಆಚರಣೆ ಮೈಸೂರು ಪ್ರಾಂತ್ಯದ ಪ್ರಭಾವ ಇರುವಲ್ಲಿ ಇಂದಿಗೂ ಜಾರಿಯಲ್ಲಿದೆ.

ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನ ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್‌ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿಯೂ ಪಟ್ಟದ ಗೊಂಬೆಗಳನ್ನ ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಈ ಮೊದಲು ಈ ಗೊಂಬೆ ಕೂರಿಸುವ ಪದ್ಧತಿ ವಿಜಯನಗರ ಸಾಮ್ರಾಜ್ಯದಲ್ಲಿದ್ದು, ಅದೇ ಸಂಪ್ರದಾಯವನ್ನು ಮೈಸೂರು ಒಡೆಯರು ಮೈಸೂರು ಪ್ರಾಂತ್ಯಕ್ಕೆ ತಂದರು ಎಂದು ಹೇಳಲಾಗುತ್ತದೆ.  ಅಂದು ‘ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಹಲವು ವಿದೇಶಿ ಪ್ರವಾಸಿಗರು ಬೊಂಬೆ ಪ್ರದರ್ಶನದ ಬಗ್ಗೆ ಬರೆದುಕೊಂಡಿದ್ದರು. ಹಾಗೆಯೇ, ಬೊಂಬೆ ಪ್ರದರ್ಶನದ ಪರಂಪರೆ ಮೈಸೂರು ಒಡೆಯರ ಕಾಲದಲ್ಲಿಯೇ ಹುಟ್ಟಿಕೊಂಡಿದೆ ಎಂಬ ಮತ್ತೊಂದು ಪ್ರತೀತಿಯೂ ಇದೆ.

ದಸರಾ ಬೊಂಬೆ ಪ್ರದರ್ಶನ, ಗೊಂಬೆಗಳ ಪ್ರತಿಷ್ಠಾಪನೆಯು ಜಾನಪದೀಯ ಪರಂಪರೆಯಂತೆಯೂ, ಸಾಂಸ್ಕೃತಿಕ ಉತ್ಸವದ ಭಾಗದಂತೆಯೂ ಕಂಡುಬಂದರೂ ಕೂಡ ಇದಕ್ಕೆ ಅದರದ್ದೇ ಆದ ಧಾರ್ಮಿಕ ಚೌಕಟ್ಟೂ ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣನ ಲೀಲೆಗಳು, ಸಮುದ್ರ ಮಥನ, ಶಿವ ಪಾರ್ವತಿಯ ಕಥೆಗಳು, ನವರಾತ್ರಿ ವೈಭವ,  ದುರ್ಗೆಯ ಅವತಾರಗಳು ಹೀಗೆ ಪುರಾಣದ ನಾನಾ ಕಥೆಗಳನ್ನು ಆಯ್ಕೆ ಮಾಡಿಕೊಂಡು ಗೊಂಬೆಗಳನ್ನ ಜೋಡಿಸಲಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ರಾಜ, ರಾಣಿ ಎಂಬ ಪಟ್ಟದ ಗೊಂಬೆಗಳನ್ನ ಕೂರಿಸಿ ಅದಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಮೂರು, ಐದು, ಏಳು, ಒಂಬತ್ತು ಮೆಟ್ಟಿಲುಗಳನ್ನು ನಿರ್ಮಿಸಿ ಬೊಂಬೆ ಕೂರಿಸುವುದು ರೂಢಿ. ಮೇಲಿನ ಮೆಟ್ಟಿಲಿನಲ್ಲಿ ‘ರಾಜ–ರಾಣಿ’, ಕೆಳ ಭಾಗದಲ್ಲಿ ಕಳಸ ಇಡುವುದು ಕಡ್ಡಾಯ. ಪ್ರತಿ ಮನೆಯಲ್ಲಿಯೂ ಅಲ್ಲಿಯ ಬೊಂಬೆ ಸಾಮ್ರಾಜ್ಯಕ್ಕೆ ಪ್ರತಿ ವರ್ಷ ನೂತನ ಸದಸ್ಯರು ಸೇರ್ಪಡೆಯಾಗುತ್ತಾರೆ. ಹಳೆಯ ಗೊಂಬೆಗಳ ಜತೆಗೆ ಹೊಸ ಗೊಂಬೆಯನ್ನೂ ಕೂರಿಸಲೇ ಬೇಕು ಎಂಬುದು ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯ. ಕನಿಷ್ಠ ಒಂದು ಜೋಡಿ ಹೊಸ ಬೊಂಬೆಯಾದರೂ ಇರಲೇಬೇಕು ಎಂಬುದೇ ನಡೆದುಬಂದ ಪರಂಪರೆ. ಹೀಗಾಗಿ ಪ್ರತಿವರ್ಷ ಗೊಂಬೆಗಳ ಸಂಖ್ಯೆ ಕೂಡ ಬೆಳೆಯುತ್ತಿರುತ್ತದೆ. ಪಟ್ಟದ ಗೊಂಬೆಗಳನ್ನಿಟ್ಟು ಕಳಸ ಪ್ರತಿಷ್ಠಾಪಿಸಿದ ಬಳಿಕ ಯಾವುದೇ ಬೊಂಬೆಯನ್ನು ಇಡುವಂತಿಲ್ಲ, ಅಲ್ಲದೆ ಇಟ್ಟ ಗೊಂಬೆಗಳನ್ನ ಬೇರೆಡೆ ಸಾಗಿಸುವಂತೆಯೂ ಇಲ್ಲ.

ನವರಾತ್ರಿಯ ಕೊನೇ ದಿನ ಅಂದರೆ ವಿಜಯ ದಶಮಿಯ ದಿನ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಸಂಭ್ರಮ, ಉತ್ಸವ ಮೇಳೈಸಿದ್ದರೆ, ಇತ್ತ ಮನೆಮನೆಗಳಲ್ಲಿ ಮೈವೆತ್ತಿದ್ದ ಗೊಂಬೆ ಸಾಮ್ರಾಜ್ಯ ತನ್ನ ದರ್ಬಾರ್‌ ಮುಗಿಸಿರುತ್ತದೆ. ಮೈಸೂರಿನಲ್ಲಿ ಜಂಬೂಸವಾರಿ ಆರಂಭವಾದರೆ, ಮನೆಮನೆಗಳಲ್ಲಿ ಪಟ್ಟದ ಗೊಂಬೆಗಳ ವಿಸರ್ಜನೆಯಾಗುತ್ತದೆ.

ಆಧುನಿಕ ಭರಾಟೆಯ ಇಂದಿನ ದಿನಗಳಲ್ಲಿಯೂ ಗೊಂಬೆ ಹಬ್ಬದಂಥ ಸುಂದರ ಸಂಪ್ರದಾಯ ಯಾವ ಕೊರತೆಯನ್ನೂ ಕಂಡಿಲ್ಲ. ಅದೆಷ್ಟೋ ಸೃಜನಶೀಲ ಮನಃಸ್ಥಿತಿಯ ಮಂದಿ ತಮ್ಮ ಮನೆಯ ಗೊಂಬೆಗಳಿಗೆ ಆಧುನಿಕ ಸ್ಪರ್ಷ ನೀಡಿ ಹೊಸ ರೀತಿಯ ಗೊಂಬೆ ಜೋಡಣೆ ಮಾಡಿ ಗಮನಸೆಳೆಯುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಂತೂ ಬಹು­ತೇಕರು ಈ ಸಂಪ್ರದಾಯವನ್ನು ಜತನದಿಂದ ಕಾಪಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ನವರಾತ್ರಿ ಸಮೀಪಿಸುತ್ತಿದ್ದಂತೆ ಪೆಟ್ಟಿಗೆಯಲ್ಲಿಟ್ಟಿರುವ ಗೊಂಬೆಗಳನ್ನು ಹೊರತೆಗೆಯಲಾಗುತ್ತದೆ. ಬೊಂಬೆಗಳನ್ನು ಪಟ್ಟಕ್ಕೇರಿಸಲು ಮಂಟಪದ ಸಿದ್ಧತೆ ಮಾಡುವ ಮನೆಯ ಹೆಣ್ಮಕ್ಕಳು, ಪುಟಾಣಿಗಳಿಗಂತೂ ಸಂಭ್ರಮವೋ ಸಂಭ್ರಮ. ಹಲವೆಡೆ ದಸರಾ ಹಬ್ಬದ ವೇಳೆ ಗೊಂಬೆ ಸ್ಫರ್ಧೆ ಕೂಡ ಏರ್ಪಡಿಸಿ ಇನ್ನಷ್ಟು ಪ್ರೋತ್ಸಾಹಿಸಲಾಗುತ್ತದೆ. ‘ಗೊಂಬೆ ಹಬ್ಬ’ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಮೆರಗು ಪಡೆಯಲಿ, ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದ ಕೆಲವೇ ಭಾಗಗಳಲ್ಲಿರುವ ಇಂಥ ಅಂದದ, ಸಡಗರದ ಪದ್ಧತಿ ಕರ್ನಾಟಕದ ಉದ್ದಗಲ ವ್ಯಾಪಿಸಲಿ ಎಂಬುದು ಆಶಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...