alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಡಲಿನೀ ಶಕ್ತಿ

ಸೃಷ್ಟಿ ರಹಸ್ಯದಷ್ಟೇ ರಹಸ್ಯ ನಮ್ಮ ದೇಹದಲ್ಲೂ ಅಡಗಿದೆ. ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರವೇ ಗೋಚರವಾಗಬಹುದಾದ, ಹಠಯೋಗಿಗಳಿಗೆ ಮಾತ್ರವೇ ಒಲಿಯಬಹುದಾದ ಅದ್ಬುತ, ಅಪರಿಮಿತ ಶಕ್ತಿಯ ಉಗಮ ಸ್ಥಾನವೇ ಕುಂಡಲಿನೀ ಶಕ್ತಿ. ಬೆನ್ನುಹುರಿಯ ಕೆಳಭಾಗದಲ್ಲಿರುವ ‘ಮೂಲಾಧಾರ ಚಕ್ರ’ದಲ್ಲಿ ಮೂರೂವರೆ ಸುತ್ತುಗಳಲ್ಲಿ ಕೆಳಮುಖ ಹೆಡೆ ಮಾಡಿಕೊಂಡು ಸುಪ್ತಾವಸ್ಥೆಯಲ್ಲಿರುವ ಕುಂಡಲಿನಿ ಶಕ್ತಿಯು ಸಾಧಾರಣ ಮನುಷ್ಯನಲ್ಲಿ ಜಾಗೃತವಾದರೆ ಅಪಾಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ.

ಬೆನ್ನುಹುರಿಯ ತಳಭಾಗದಿಂದ ಮೇಲ್ಮುಖ(ಊಧ್ರ್ವ)ವಾಗಿ 3 ನಾಡಿಗಳಾದ ಇಡಾ, ಪಿಂಗಳಾ ಮತ್ತು ಸುಷುಮ್ನ ನಾಡಿಗಳನ್ನು ಹಾವಿನಂತೆ ಸುತ್ತುತ್ತಾ, ಮೇಲೆರುತ್ತಾ ಮೆದುಳು ಬಳ್ಳಿಯ ನೆತ್ತಿಯ ಭಾಗದವರೆಗೆ ಹಾದುಹೋಗಿರುವ ಸುಷುಮ್ನ ನಾಡಿಗಳಲ್ಲಿ ಹರಿಯುವ ಪ್ರಾಣವಾಯುವು ನಾವು ಹಾಕಿಕೊಳ್ಳುವ ಮೂರೆಳೆಯ (ಇಡಾ, ಪಿಂಗಳಾ, ಸುಷುಮ್ನಾ) ಜನಿವಾರವನ್ನು ಪ್ರತಿನಿಧಿಸುತ್ತವೆ.

ಕೆಂಪುಬಣ್ಣದ ಇಡಾ ನಾಡಿ, ಹಳದಿ ಬಣ್ಣದ ಪಿಂಗಳ ಮತ್ತು ನೀಲಿಬಣ್ಣದ ಸುಷುಮ್ನ ನಾಡಿಗಳ ಮೂಲಕ (+ತಜ, -ತಜ) ಧನ, ಋಣ ಶಕ್ತಿಗಳಲ್ಲಿ ಋಣಶಕ್ತಿಯೇ ಪ್ರಮುಖವಾಗಿರುತ್ತದೆ. ಕಣ್ಣಿಗೆ ಕಾಣದ ‘ಸೂಕ್ಷ್ಮಶರೀರ’ ಮತ್ತು ಕಣ್ಣಿಗೆ ಕಾಣುವ ‘ಸ್ಥೂಲ ಶರೀರ’ವೆಂಬ ಎರಡು ರೀತಿಯ ಶರೀರಗಳಲ್ಲಿ ಪ್ರಾಣಶಕ್ತಿಯು ದೇಹದಲ್ಲಿರುವ 72000 ನಾಡಿಗಳಲ್ಲಿ ನಿರಂತರ ಹರಿದಾಡುತ್ತಿರುತ್ತದೆ.

ಹರಿದಾಟ ಚೆನ್ನಾಗಿರುವವರೆಗೂ ಶರೀರ ನಿರೋಗಿಯಾಗಿರುತ್ತದೆ. ಪ್ರಾಣಶಕ್ತಿಯ ಹರಿದಾಟಕ್ಕೆ ಅಡೆ-ತಡೆ ಉಂಟಾದಲ್ಲಿ ದೇಹದ ಆ ಭಾಗದಲ್ಲಿ ನೋವು, ಸಮಸ್ಯೆಗಳು ಕಾಡತೊಡಗುತ್ತದೆ. ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿಯುತ್ತದೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಮನೆಯಲ್ಲಿರುವ ಹತ್ತಾರು ಸ್ವಿಚ್ಗಳಲ್ಲಿ ಯಾವುದೋ ಒಂದು ‘ಸ್ವಿಚ್’ ಕೆಟ್ಟಾಗ ಅದು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಸರಿಪಡಿಸಲು ಪರಿಣಿತರೇ ಬರಬೇಕಾಗುತ್ತದೆ ಅಥವಾ ಸಣ್ಣಪುಟ್ಟ     ಸಮಸ್ಯೆಯಾದರೆ ನಾವೇ ಸರಿಪಡಿಸಿಕೊಳ್ಳಬಹುದಲ್ಲವೇ.

ಇದನ್ನು ಸರಿಪಡಿಸಲು ‘ಚಕ್ರ ಹೀಲಿಂಗ್’ನ ಮೊರೆ ಹೋಗಬೇಕಾಗುತ್ತದೆ. ಇದೇ ಪ್ರಾಣಶಕ್ತಿಯನ್ನು ಜಪಾನಿಯರು ‘ಚಿ’ (ಛಿ) ಮತ್ತು ಚೀನಿಯರು ‘ಕಿ’ (ಞ) ಎನ್ನುತ್ತಾರೆ. ವೈಜ್ಞಾನಿಕ ಭಾಷೆಯಲ್ಲಿ ‘ವಿಶ್ವಶಕ್ತಿ’ ಎನ್ನುತ್ತೇವೆ.

ಮೂಲಾಧಾರ ಚಕ್ರವು ನೆಲದತ್ತ ಮುಖ ಮಾಡಿದ ಕಮಲದ ಹೂವಿನಂತಿದ್ದರೆ, ನೆತ್ತಿಯ ಭಾಗದಲ್ಲಿರುವ ಸಹಸ್ರಾರು ಚಕ್ರದಲ್ಲಿ ಸಹಸ್ರ ದಳಗಳ ಕಮಲದ ಹೂ ಆಕಾಶದತ್ತ ಮುಖ ಮಾಡಿರುತ್ತದೆ. ಈ ಎರಡು ಚಕ್ರಗಳನ್ನು ಸಂಪರ್ಕಿಸುವ ‘ಸುಷುಮ್ನಾ’ ನಾಡಿಯಲ್ಲಿ  ಮಾತ್ರವೇ ‘ಕುಂಡಲಿನಿ ಶಕ್ತಿ’ ಜಾಗೃತಗೊಳ್ಳುತ್ತದೆ. ಸುಷುಮ್ನಾ ನಾಡಿಯು ಬೆನ್ನಗಂಬಕ್ಕೆ ಅಂಟಿಕೊಂಡು ಕಂಬದಂತೆ ನೇರವಾಗಿದ್ದು, ಇಡಾ ಮತ್ತು ಪಿಂಗಳಾಗಳು ಆ ಕಂಬಕ್ಕೆ ಹಾವಿನಂತೆ ಬೆಸೆದುಕೊಂಡು ಊಧ್ರ್ವಮುಖವಾಗಿ ಸಂಚರಿಸುತ್ತವೆ.

ಮೂಲದಿಂದ ನೆತ್ತಿಯ ಭಾಗದಲ್ಲಿ ಸೇರುವ ಮುನ್ನ ಮೂಲಾಧಾರದಿಂದ ಮೇಲೆರುವಾಗ ಒಟ್ಟಾರೆ 6 ಕಡೆ ಸಂಗಮಗೊಳ್ಳುತ್ತಾ ಸಾಗುತ್ತವೆ. ಅವೇ ‘ಷಟ್ಚಕ್ರಗಳು’ ಅಥವಾ ಶಕ್ತಿಕೇಂದ್ರಗಳು. ಚಕ್ರಗಳ ಬಗ್ಗೆ ಕುಂಡಲಿನಿ ಶಕ್ತಿಯ ಬಗ್ಗೆ 16ನೇಯ ಶತಮಾನದಲ್ಲಿ ಪಂಡಿತ ಪೂರ್ಣಾನಂದ ಎಂಬ ಯೋಗಿ ವಿದ್ವಾಂಸರು ‘ಷಟ್ಚಕ್ರ ನಿರೂಪಣ’ ಎಂಬ ಗ್ರಂಥವನ್ನು ರಚಿಸಿದರು. ಈ ಗ್ರಂಥದ ಸಾರವನ್ನು ‘ಸರ್ ಜಾನ್ ವುಡ್ರಾಫ್’ ಎಂಬ ವಿದೇಶಿ ವಿದ್ವಾಂಸರು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.

ಮಾರುಕಟ್ಟೆಯಲ್ಲಿ  ಈ ಗ್ರಂಥಗಳು ಲಭ್ಯವಿದ್ದು ಕುತೂಹಲಿಗಳು ಮತ್ತಷ್ಟು ಮಾಹಿತಿಯನ್ನು ಪಡೆಯಬಹುದು. ‘ಸಂಧ್ಯಾದೇವಿ’ ಮತ್ತು ‘ಆದಿಶೇಷ ಶಕ್ತಿ’ ಎಂದು ಸಹ ಕುಂಡಲಿನಿಗೆ ಕರೆಯುತ್ತಾರೆ. ಇಡಾ, ಪಿಂಗಳಾ ಮತ್ತು ಸುಷುಮ್ನ ನಾಡಿಗಳು ಮೂಲಾಧಾರದಲ್ಲಿ ಸಂಗಮವಾಗುವುದರಿಂದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ರೀತಿಯಲ್ಲಿ ‘ತ್ರಿವೇಣಿ ಶಕ್ತಿ’ ಸಂಗಮವಾಗಿರುತ್ತದೆ.

ಮೂಲಾಧಾರ ಚಕ್ರವನ್ನು ಸಚೇತನಗೊಳಿಸುವ ದೈಹಿಕ ಚಟುವಟಿಕೆಗಳನ್ನು ಯೋಗಾಸನ, ಪ್ರಾಣಾಯಾಮಗಳನ್ನು ನಿರಂತರ ಮಾಡಿದಾಗ ಕುಂಡಲಿನಿಯು ನಿಧಾನಗತಿಯಲ್ಲಿ ಜಾಗೃತಗೊಳ್ಳತೊಡಗುತ್ತದೆ. ಇದರ ಪರಿಣಾಮಗಳನ್ನು, ಫಲಿತಾಂಶಗಳನ್ನು ಸಹ ಸಾಮಾನ್ಯರಾದ ನಾವೆಲ್ಲರೂ ಗಮನಿಸಿರುತ್ತೇವೆ. ಉದಾಹರಣೆಗೆ ನಿರಂತರವಾಗಿ ಕೆಲವು ವರ್ಷಗಳಿಂದ ಯೋಗ-ಪ್ರಾಣಾಯಾಮಗಳನ್ನು ಮಾಡಿಕೊಂಡಿರುವ ಯೋಗಾಭ್ಯಾಸಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅವರಲ್ಲಿ ಚಂಚಲತೆ ಇರುವುದಿಲ್ಲ. ಶಾಂತತೆ, ಮುಖದಲ್ಲಿ ಪ್ರಸನ್ನತೆ, ಮುಖದ ಕಾಂತಿಯಲ್ಲಿ ತೇಜಸ್ಸುಗಳು ತುಂಬಿರುತ್ತವೆ. ಮಾನಸಿಕ ಸ್ಥಿರತೆಯನ್ನು ಹೊಂದಿ, ಕಾರ್ಯಕುಶಲತೆ, ದಕ್ಷತೆಯ ಗುಣಗಳು ಪ್ರಕಟಗೊಂಡಿರುತ್ತವೆ.

ಲೌಕಿಕ ವ್ಯಾಮೋಹಗಳಿಂದ ಅಂತರವನ್ನು ಕಾಪಾಡಿಕೊಂಡು ‘ಮಾನಸಿಕ ಸಮತೋಲನ’ವನ್ನು ಪಡೆದಿರುತ್ತಾರೆ. ಮುಖ್ಯವಾಗಿ ದೈಹಿಕ ಮಾನಸಿಕ ರೋಗಗಳಿಂದ ಮುಕ್ತರಾಗಿ ನಿರೋಗಿಯಾಗಿರುತ್ತಾರೆ.  ಅತೀಂದ್ರಿಯ ಶಕ್ತಿಗಳನ್ನು ಸಾಧಿಸಿಕೊಳ್ಳಲು, ಕುಂಡಲಿನಿ ಶಕ್ತಿ ಜಾಗೃತಿಗೊಳಿಸಿಕೊಳ್ಳುವ ಮುನ್ನ ಕೆಲವು ಎಚ್ಚರಿಕೆಗಳನ್ನು ಅಭ್ಯಾಸಿಗಳು ನೆನಪಿಟ್ಟುಕೊಳ್ಳಲೇಬೇಕು.

ಮಲಗಿರುವ ಹಾವನ್ನು ಬಡಿದೆಬ್ಬಿಸುವುದು ಎಷ್ಟು ಅಪಾಯವೋ ಹಾಗೆಯೇ ಈ ಶಕ್ತಿಯನ್ನು ಸಂಪಾದಿಸುವ ಹುಚ್ಚು ಪ್ರಯತ್ನಗಳಲ್ಲಿ ತೊಡಗುವ ಮೊದಲು ಪರಿಣಿತರ, ತಜ್ಞರ, ಅನುಭವೀ ಯೋಗಸಾಧಕ, ಶಿಕ್ಷಕರ ಸಲಹೆ, ಮಾರ್ಗದರ್ಶನಗಳನ್ನು ಪಡೆಯುವುದು ಒಳಿತು. ‘ಕುಂಡಲಿನಿ ಜಾಗೃತಿ ಶಿಬಿರ’ ಎಂಬ ಬಣ್ಣದ ಜಾಹಿರಾತುಗಳಿಗೆ, ಮರುಳಾಗಿ 8-10 ದಿನಗಳ ಶಿಬಿರದಲ್ಲಿ ಸಿದ್ದಿಸಿಕೊಳ್ಳಬಹುದಾದ ಸಲೀಸಾದ ವಿದ್ಯೆಯಲ್ಲವಿದು.

-ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್ ಶೆಟ್ಟರ್, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪುರಸ್ಕೃತರು

ಕಣಾದ ಯೋಗ & ರೀಸರ್ಚ್ ಫೌಂಡೇಶನ್ (ರಿ), ನಂ.9, ಸ್ಕಿನ್ ಟಚ್ ಯೋಗ ಶಾಪ್

3 ನೇ ಕ್ರಾಸ್ ದುರ್ಗಿಗುಡಿ, ಶಿವಮೊಗ್ಗ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...