alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಲಕ್ಷ್ಯ ಮಾಡಲೇಬಾರದ ದಂತ ಸಮಸ್ಯೆಗಳು

ಭಾರತದಲ್ಲಿ ಹಲ್ಲಿನ ತೊಂದರೆಗಳಿಗೆ ವೈದ್ಯರ ಬಳಿ ತೆರಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆಯಂತೆ. ಶೇಕಡಾ 92 ರಷ್ಟು ಮಂದಿ ರೋಗಿಗಳು ಸಹಿಸಲಸಾಧ್ಯ ನೋವು ಕಾಣಿಸಿಕೊಂಡಾಗ ಮಾತ್ರ ದಂತ ವೈದ್ಯರ ಬಳಿ ಬರುತ್ತಾರೆ ಎನ್ನುತ್ತದೆ ಒಂದು ಸಮೀಕ್ಷೆ. ಇದೇ ಸಮೀಕ್ಷೆಯ ಪ್ರಕಾರ 74% ರಷ್ಟು ಜನ ಹಲ್ಲು ನೋವು ಕಾಣಿಸಿಕೊಂಡರೂ ಅಥವಾ ಒಸಡಿನಲ್ಲಿ ರಕ್ತಸ್ರಾವವಾದರೂ ಕೂಡ ದಂತವೈದ್ಯರನ್ನ ಕಾಣದೇ ಹಾಗೆಯೇ ಸಹಿಸಿಕೊಳ್ಳುತ್ತಿರುತ್ತಾರಂತೆ. ಅಲ್ಲದೆ ತಮ್ಮ ಹಲ್ಲುಗಳಲ್ಲಿ ನೋವಿಲ್ಲ ಅಂದರೆ ಹಲ್ಲು ಆರೋಗ್ಯವಾಗಿದೆ ಎಂದು ಊಹಿಸುವವರೇ ಜಾಸ್ತಿ. ಇಂಥ ನಿರ್ಲಕ್ಷ್ಯದಿಂದಾಗಿ ಸಣ್ಣ ಸಮಸ್ಯೆ ದೊಡ್ಡದಾಗಿ ಚಿಕಿತ್ಸೆಯ ವೆಚ್ಚ ಕೂಡ ಹೆಚ್ಚುವುದಲ್ಲದೆ, ಅಧಿಕ ನೋವು ಅನುಭವಿಸುವಂಥ ಪರಿಸ್ಥಿತಿಯೂ ಒದಗಿಬರುತ್ತದೆ.

ಹೀಗಾಗಿ ಹಲ್ಲುಗಳಲ್ಲಿ ಯಾವ್ಯಾವ ಸಮಸ್ಯೆಗಳು ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು ಎಂಬ ಪಟ್ಟಿಯನ್ನ ನಾವಿಲ್ಲಿ ನೀಡಿದ್ದೇವೆ ನೋಡಿ.

ಹಲ್ಲುಗಳ ಮೇಲೆ ಕಪ್ಪು ಚುಕ್ಕೆ ಅಥವಾ ಕಪ್ಪು ಬಿರುಕು ಕಾಣಿಸಿಕೊಳ್ಳುವುದು

ಎಲ್ಲ ಕಪ್ಪು ಚುಕ್ಕೆಗಳೂ ಹುಳುಕಲ್ಲವಾದರೂ, ಹಲ್ಲಿನ ಹುಳುಕೆಲ್ಲವೂ ಕಪ್ಪು ಚುಕ್ಕೆಯಿಂದಲೇ ಆರಂಭವಾಗುತ್ತವೆ. ಹಲ್ಲಿನ ಹೊರಭಾಗದ ಪದರ (Enamel ) ಮಾತ್ರ ಹುಳುಕಾಗಿದ್ದರೆ ನೋವು ಕಾಣಿಸಿಕೊಳ್ಳುವುದಿಲ್ಲ ಆದರೆ ನೋವಿಲ್ಲ ಎಂಬ ಕಾರಣಕ್ಕೆ ಅಲಕ್ಷ್ಯ ಮಾಡಕೂಡದು. ದಿನಕಳೆದಂತೆ ಅದೇ ಹುಳುಕು ಹಲ್ಲಿನ ಆಳಕ್ಕಿಳಿದರೆ ಸಹಿಸಲಸಾಧ್ಯ ನೋವು ಕಾಣಿಸಿಕೊಳ್ಳಬಹುದು. ಇದು ಹಲ್ಲಿನ ಹುಳುಕಿನ ಆರಂಭದ ಲಕ್ಷಣವಾಗಿರುವ ಕಾರಣ ಇದರ ಚಿಕಿತ್ಸೆಗೆ ಹೆಚ್ಚಿನ ಹಣವೂ ಬೇಡ, ಸಮಯವೂ ಬೇಡ. ಯಾವುದೇ ನೋವು ಅನುಭವಿಸದೇ ನಿಮ್ಮ ಹಲ್ಲಿನ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.

ಹಳದಿ ಅಥವಾ ಕಂದುಬಣ್ಣಕ್ಕೆ ತಿರುಗಿದ ಹಲ್ಲಿನ ಬಣ್ಣ,  ವಿಶೇಷವಾಗಿ ಹಲ್ಲಿನ ಹಿಂಭಾಗದಲ್ಲಿ ಬಣ್ಣ ಬದಲಾಗಿರುವುದು

ಆರಂಭದಲ್ಲಿ ಹಲ್ಲಿನ ಬಣ್ಣ ಬದಲಾದ ಕಾರಣಕ್ಕೆ ಮಾತ್ರ ನಿಮಗೆ ಯಾವುದೇ ನೋವು, ಕಿರಿಕಿರಿ ಉಂಟಾಗದಿದ್ದರೂ, ಭವಿಷ್ಯದಲ್ಲಿ ಇದರಿಂದ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ದಂತ ತಜ್ಞರು. ಹಲ್ಲಿನ ಮೇಲೆ ಕಂಡುಬರುವ ಈ ಕಲೆಗಳು ಬ್ಯಾಕ್ಟೀರಿಯಾ ಮತ್ತು ಆಹಾರ ಕಣಗಳು ಬೆರೆತು ಉಂಟಾಗುವ ಸಂಗ್ರಹಗಳಾಗಿದ್ದು, ಸಮಯ ಕಳೆದಂತೆ, ಇದು ತನ್ನ ಗಾತ್ರವನ್ನ ಹೆಚ್ಚಿಸಿಕೊಳ್ಳುತ್ತಾ ಹೋಗುವುದಲ್ಲದೆ ಇದರಿಂದ ಒಸಡುಗಳ ಸೋಂಕು ಮತ್ತು ಬಾಯಿಯ ದುರ್ಗಂಧ ಹೆಚ್ಚುತ್ತದೆ. ಅಲ್ಲದೆ ಹಲ್ಲುಗಳ ಬುಡದಲ್ಲಿಯೇ ಇರುವ ಈ ಕಲೆಗಳು ಹಲ್ಲುಗಳನ್ನೇ ಕರಗಿಸಬಲ್ಲವು. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದರಿಂದ ಅಂತಿಮವಾಗಿ, ಹಲ್ಲನ್ನೇ ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ ವರ್ಷಕ್ಕೆ ಒಮ್ಮೆಯಾದರೂ ದಂತ ವೈದ್ಯರನ್ನ ಭೇಟಿ ಮಾಡಿ ಹಲ್ಲುಗಳನ್ನ ಕ್ಲೀನ್‌ ಮಾಡಿಸಿಕೊಳ್ಳುವುದು ಒಳ್ಳೆಯದು.

ಮತ್ತೆ ಮತ್ತೆ ಒಂದೇ ಜಾಗದಲ್ಲಿ ಆಹಾರ ಸಿಲುಕಿಕೊಳ್ಳುವುದು

ಊಟ, ತಿಂಡಿಯ ನಂತರ ಪ್ರತಿ ಬಾರಿಯೂ ಹಲ್ಲುಗಳಲ್ಲಿ ಆಹಾರ ಕಣಗಳು ಸಿಲುಕಿಕೊಂಡು ಕಿರಿಕಿರಿ ಉಂಟು ಮಾಡುತ್ತಿದ್ದರೆ ಖಂಡಿತವಾಗಿಯೂ ಅದನ್ನ ನಿರ್ಲಕ್ಷಿಸಕೂಡದು. ಊಟ, ತಿಂಡಿಯ ನಂತರ ಟೂತ್‌ಪಿಕ್‌, ಕಡ್ಡಿ, ಪಿನ್‌ಗಳ ಸಹಾಯದಿಂದ ಹಲ್ಲಿನಲ್ಲಿ ಸಿಲುಕಿರುವ ಆಹಾರ ಕಣವನ್ನ ಹೊರತೆಗೆಯುವ ಅಭ್ಯಾಸವುಳ್ಳ ಹಲವರನ್ನ ನಾವು ನೋಡಿಯೇ ಇರುತ್ತೇವೆ. ಇದು ಅವರ ಅಭ್ಯಾಸ ಮಾತ್ರವಲ್ಲ ಸಮಸ್ಯೆ ಕೂಡ. ಇಂಥ ಸಮಸ್ಯೆಯನ್ನ ನಿರ್ಲಕ್ಷಿಸಿದರೆ ಮುಂದೆ ಅದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಲ್ಲದು. ಹಲ್ಲಿನ ಮೇಲಿನ ಆ ತೂತು ಆರಂಭದ ಹುಳುಕು ಆಗಿರುವ ಕಾರಣ, ಪ್ರತಿ ಬಾರಿ ಆಹಾರ ಕುಳಿತಾಗಲೂ ಅಲ್ಲಿರುವ ಬ್ಯಾಕ್ಟೇರಿಯಾ ನಿಮ್ಮ ಹಲ್ಲನ್ನು ತಿಂದು ದೊಡ್ಡ ಹುಳುಕನ್ನ ಉಂಟುಮಾಡಬಲ್ಲವು.

ಮಕ್ಕಳ ಹಾಲು ಹಲ್ಲುಗಳಲ್ಲಿ ಕಂಡುಬರುವ ಹುಳುಕು

ಹಲವು ಮಕ್ಕಳ ಹಾಲು ಹಲ್ಲುಗಳು ಹುಟ್ಟುವಾಗಲೇ ಹುಳುಕಾಗಿ ಹುಟ್ಟುತ್ತವೆ. ಅಥವಾ ನಂತರ ಹುಳುಕಾಗುತ್ತವೆ. ಇಂಥ ಹುಳುಕು ಹಲ್ಲುಗಳು ಮಕ್ಕಳಲ್ಲಿ ಕಂಡುಬಂದರೂ ಕೂಡ ಅವರ ಪಾಲಕ ಪೋಷಕರು ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುತ್ತಾರೆ.  ಮಕ್ಕಳಲ್ಲಿ ಹಲ್ಲುನೋವು ಕಾಣಿಸಿಕೊಳ್ಳುವವರೆಗೂ ವೈದ್ಯರ ಬಳಿ ಕರೆತಂದಿರುವುದೇ ಇಲ್ಲ. ಮುಂದೆ ಬಿದ್ದು ಹೋಗುವ ಹಲ್ಲು ಎಂಬ ಕಾರಣಕ್ಕೆ ಮಕ್ಕಳ ಹಾಲು ಹಲ್ಲುಗಳು ಪಾಲಕರಿಂದ ನಿರ್ಲಕ್ಷ್ಯಕ್ಕೊಳಗಾಗಿರುತ್ತವೆ. ಆದರೆ, ಹಾಲು ಹಲ್ಲುಗಳಲ್ಲಿ ಕಂಡುಬರುವ ಈ ಹುಳುಕನ್ನ ನಿರ್ಲಕ್ಷ್ಯ ಮಾಡಿದರೆ, ಮುಂಬರುವ ಶಾಶ್ವತ ಹಲ್ಲುಗಳು ಕೂಡ ಕೆಡುವ ಸಾಧ್ಯತೆಯೇ ಹೆಚ್ಚು. ಅಲ್ಲದೆ, ಸರಿಯಾದ ಸಮಯದಲ್ಲಿ ಹಾಲು ಹಲ್ಲು ಬೀಳದೆ ಇದ್ದಾಗಲೂ, ಶಾಶ್ವತ ಹಲ್ಲು ಹುಟ್ಟುವುದಕ್ಕಿದು ತೊಂದರೆಯಾಗಬಲ್ಲದು.  ಇದೇ ಕಾರಣಕ್ಕೆ ಓರೆ ಕೋರೆಯಾಗಿ, ಅಸಮ ಶಾಶ್ವತ ಹಲ್ಲುಗಳು ಹುಟ್ಟುತ್ತವೆ.

ಹಲ್ಲು ಕೀಳಿಸಿದ ಜಾಗವನ್ನ ನಿರ್ಲಕ್ಷಿಸುವುದು

ಯಾವುದೋ ಸಮಸ್ಯೆಯಿಂದಾಗಿ ಹಲ್ಲನ್ನ ಕೀಳಿಸುವ ಪರಿಸ್ಥಿತಿ ಬಂದಾಗ, ಹಲ್ಲು ಕೀಳಿಸಿದ ನಂತರ ಸಮಸ್ಯೆ ಮುಗಿಯಿತು ಅಂದುಕೊಂಡು ಸುಮ್ಮನಾಗುವವರೇ ಜಾಸ್ತಿ. ಆದರೆ ಹಲ್ಲು ಕಿತ್ತ ಜಾಗದಲ್ಲಿ ಕೃತಕ ಹಲ್ಲನ್ನ ಕೂರಿಸಿಕೊಳ್ಳಬೇಕು. ಇಲ್ಲದಿದ್ದರೆ, ಹಲ್ಲು ಕಿತ್ತ ಖಾಲಿ ಜಾಗದಲ್ಲಿ ಅದರ ಅಕ್ಕಪಕ್ಕದ ಹಲ್ಲುಗಳು ಸರಿಯಲು ಪ್ರಾರಂಭಿಸುತ್ತದೆ. ಖಾಲಿ ಜಾಗದಲ್ಲಿ ಸುತ್ತಲಿನ ಹಲ್ಲು ಜರುಗಿ ಕೂರುವುದರಿಂದ ಅಗೆಯಲು ಸಾಧ್ಯವಾಗದೇ ಸಮಸ್ಯೆ ಉಂಟಾಗಬಲ್ಲದು. ಆಹಾರವನ್ನ ಸರಿಯಾಗಿ ಅಗೆದು ನುಂಗದಿದ್ದಲ್ಲಿ ಉದರ ಸಂಬಂಧಿ ಅನಾರೋಗ್ಯ ಸಮಸ್ಯೆ ಕಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...