
ದೇಶದಾದ್ಯಂತ ನಗದು ಸಮಸ್ಯೆ ಮತ್ತೆ ಎದುರಾಗಿದೆ. ಅನೇಕ ರಾಜ್ಯಗಳ ಎಟಿಎಂಗಳಲ್ಲಿ ‘ನೋ ಕ್ಯಾಶ್’ ಬೋರ್ಡ್ ನೇತಾಡುತ್ತಿದೆ. ಇದ್ರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದೇಶದಾದ್ಯಂತ ನಗದು ಸಮಸ್ಯೆ ಎದುರಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಇನ್ನು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಅಚಾನಕ್ ನಗದಿನ ಬೇಡಿಕೆ ಹೆಚ್ಚಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ. ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಚಲಾವಣೆಯಾಗ್ತಿದೆ. ಬ್ಯಾಂಕ್ ನಲ್ಲಿ ಕೂಡ ಸಾಕಷ್ಟು ನಗದಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ದೇಶದಲ್ಲಿ ನಗದು ಸಮಸ್ಯೆಗೆ ಅನೇಕ ಕಾರಣಗಳಿವೆ. ಸರ್ಕಾರಿ ಮೂಲಗಳ ಪ್ರಕಾರ ದೇಶದ ಕೆಲವೆಡೆ ಬೈಸಾಖಿ, ಬಿಹು, ಸೌರ ಹೊಸ ವರ್ಷದಂತಹ ಹಬ್ಬಗಳು ಬಂದಿದ್ದರಿಂದ ಜನರಿಗೆ ಹೆಚ್ಚು ನಗದಿನ ಅವಶ್ಯಕತೆಯಿತ್ತು. ಹಾಗಾಗಿ ಜನರು ಹಣವನ್ನು ಬ್ಯಾಂಕ್ ನಲ್ಲಿ ಜಮಾ ಮಾಡಲಿಲ್ಲ. ಈ ಬಗ್ಗೆ ಆರ್ ಬಿ ಐ ಅಧಿಕಾರಿಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿದೆ.
ನಗದು ವಿಚಾರದಲ್ಲಿ ಆಗಾಗ ಏರುಪೇರಾಗುತ್ತಿರುತ್ತದೆ. ಒಂದು ರಾಜ್ಯದಲ್ಲಿ ನಗದಿಗೆ ಬೇಡಿಕೆ ಹೆಚ್ಚಾದ್ರೆ ಇನ್ನೊಂದು ರಾಜ್ಯದಲ್ಲಿ ನಗದಿನ ಕೊರತೆ ಎದುರಾಗುತ್ತದೆ.
ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರ್ತಿದೆ. ಈ ಕಾರಣಕ್ಕೆ ನಗದಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಎಟಿಎಂನಲ್ಲಿ ಹಣವಿರದಿರಲು ಕಾರಣ.
ಎಫ್ಡಿಆರ್ ಬಿಲ್ ಕೂಡ ಇದಕ್ಕೆ ಕಾರಣ ಎನ್ನಲಾಗ್ತಿದೆ. ಬ್ಯಾಂಕಿನಲ್ಲಿ ಹಣ ಅಸುರಕ್ಷಿತ ಎಂಬ ಸುದ್ದಿ ಹರಡಿದ್ದು, ಈ ಕಾರಣಕ್ಕೆ ಜನರು ಹಣವನ್ನು ಜಮಾ ಮಾಡ್ತಿಲ್ಲ.
ಮದುವೆ ಸಮಾರಂಭಗಳು ಹೆಚ್ಚಾಗ್ತಿದೆ. ಇದ್ರ ಜೊತೆಗೆ ಕೆಲವರು ನಗದಿನ ಸಂಗ್ರಹಕ್ಕೆ ಶುರು ಮಾಡಿದ್ದಾರೆ. ನಗದು ಚಲಾವಣೆಯನ್ನು ಕಡಿಮೆ ಮಾಡಿದ್ದಾರೆ. ಇದೂ ಕಾರಣ ಎನ್ನಲಾಗ್ತಿದೆ.