alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟ್ ಬ್ಯಾನ್ : ತಿಂಗಳಾದ್ರೂ ಬಗೆಹರಿಯಲಿಲ್ಲ ಸಮಸ್ಯೆ

rush-s

500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳ ಚಲಾವಣೆಯನ್ನು ರದ್ದುಪಡಿಸಿ, ಬರೋಬ್ಬರಿ 1 ತಿಂಗಳಾಗಿದ್ದರೂ ಜನ ಸಾಮಾನ್ಯರ ಸಂಕಷ್ಟ ಇನ್ನೂ ಬಗೆಹರಿಯುತ್ತಿಲ್ಲ.

ಕಳೆದ ನವೆಂಬರ್ 8 ರಂದು ನೋಟ್ ಬ್ಯಾನ್ ಮಾಡಿದ ಬಳಿಕ, ಹೊಸ 500 ರೂ. ಹಾಗೂ 2000 ರೂ. ನೋಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಜನ ತಮ್ಮಲ್ಲಿದ್ದ ಹಳೆಯ ನೋಟ್ ಗಳನ್ನು ಬ್ಯಾಂಕ್ ಗಳಿಗೆ ಜಮಾ ಮಾಡಿದ್ದಾರೆ. ಹಣ ವಿನಿಮಯ, ಖಾತೆಗಳಿಗೆ ಹಣ ಜಮಾ ಮಾಡುವುದು, ವಿತ್ ಡ್ರಾ ಮೊದಲಾದ ಕೆಲಸಗಳಿಗೆ ಜನ ಬ್ಯಾಂಕ್, ಎ.ಟಿ.ಎಂ.ಗಳ ಬಾಗಿಲು ಕಾಯುವಂತಾಗಿದೆ. ದೇಶಾದ್ಯಂತ ಬ್ಯಾಂಕ್, ಎ.ಟಿ.ಎಂ. ಬಾಗಿಲಲ್ಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

ತಮ್ಮದೇ ಖಾತೆಯಲ್ಲಿ ಹಣವಿದ್ದರೂ ಅದನ್ನು ಪಡೆದುಕೊಳ್ಳಲಾಗದೇ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ರೂ. ಹೊಸ ನೋಟ್ ಗಳನ್ನು ಕಮಿಷನ್ ಪಡೆದು ಶ್ರೀಮಂತರಿಗೆ ಕೊಟ್ಟಿದ್ದಾರೆ. ಕಮಿಷನ್ ಪಡೆದು ನೋಟ್ ವಿನಿಮಯ ಮಾಡಿಕೊಡುವ ದಂಧೆಯೇ ನಡೆದಿದೆ. ಅಲ್ಲಲ್ಲಿ ಐ.ಟಿ. ದಾಳಿ, ಪೊಲೀಸ್ ಕಾರ್ಯಾಚರಣೆ ನಡೆದು ಕೋಟ್ಯಂತರ ರೂ ಹೊಸ ನೋಟ್ ಗಳನ್ನು ಜಪ್ತಿ ಮಾಡಲಾಗಿದೆ.

ಜನ್ ಧನ್ ಖಾತೆಗಳಿಗೂ ಕೋಟ್ಯಂತರ ರೂ. ಹಣ ಜಮಾ ಆಗಿದೆ. ಬಡವರ ಖಾತೆಗಳು ದುರ್ಬಳಕೆ ಆಗಿವೆ. ಕಾಳಧನಿಕರು ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಳ್ಳುವ ಕೆಲಸವನ್ನು ಮುಂದುವರೆಸಿದ್ದಾರೆ.

ನೋಟ್ ಬ್ಯಾನ್ ಬಳಿಕ ಹೈರಾಣಾಗಿರುವುದು ಜನಸಾಮಾನ್ಯರು ಮಾತ್ರ. ಇಂತಿಷ್ಟೇ ಹಣ ಪಡೆಯಬೇಕೆಂದು ನಿಯಂತ್ರಣ ಹೇರಲಾಗಿದೆ. ನಿಗದಿಪಡಿಸಿದ ಹಣವನ್ನು ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ನಗದು ಕೊರತೆಯಿಂದ ಹಣ ಸಿಗುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಮಸ್ಯೆ ತೀವ್ರತರವಾಗಿದೆ. ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ರೈತರ ಪಾಡಂತೂ ಹೇಳತೀರದಾಗಿದೆ. ಕೈಯಲ್ಲಿ 2000 ರೂ. ಮುಖಬೆಲೆಯ ನೋಟಿದ್ದರೂ, ಅದಕ್ಕೆ ಚಿಲ್ಲರೆ ಸಿಗುತ್ತಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ನಗದು ಕೊರತೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಹೇಳುತ್ತಿದೆ. ಆದರೆ, ಬಂದ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಎಂಬುದೇ ಜನರಿಗೆ ತಿಳಿಯದಾಗಿದೆ. ಜನ ತಾಳ್ಮೆ ಕಳೆದುಕೊಂಡಿದ್ದಾರೆ. ಅಲ್ಲಲ್ಲಿ ಬ್ಯಾಂಕ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ಕೂಡ ಮಾಡಲಾಗಿದೆ.  ಜನ ಇನ್ನೂ ಬ್ಯಾಂಕ್ ಬಾಗಿಲು ಕಾಯುವುದು ತಪ್ಪಿಲ್ಲ. 1 ತಿಂಗಳಿಂದ ಹಣಕ್ಕಾಗಿ ಪರದಾಟ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...