
ಖ್ಯಾತ ಪಂಜಾಬಿ ಗಾಯಕ ಪರ್ಮೀಶ್ ವರ್ಮಾ ಮೇಲೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಕುಖ್ಯಾತ ಭೂಗತ ಪಾತಕಿ ದಿಲ್ಪ್ರೀತ್ ಸಿಂಗ್ ದಹಾನ್, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರ್ಮಿಶ್ ವರ್ಮಾ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಪೋಸ್ಟ್ ಮಾಡಿದ್ದಾನೆ.
ಕಳೆದ ಬಾರಿ ಪರ್ಮಿಶ್ ಮೇಲೆ 50 ರೌಂಡ್ ಗುಂಡು ಹಾರಿಸಿದ್ದೆವು. ಆದರೆ ಈ ಬಾರಿ 500 ರೌಂಡ್ ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಹೇಳಿರುವ ದಿಲ್ಪ್ರೀತ್ ಸಿಂಗ್, ಪರ್ಮಿಶ್ ವರ್ಮಾ ಮೇಲೆ ತಾನು ಹಾಗೂ ಸಂಗಡಿಗರಾದ ಆಕಾಶ್ ಮಹರಾಸ್ಟರ್, ಹರ್ವಿಂದರ್ ಸಿಂಗ್ ಹಾಗೂ ಸುಖ್ಪ್ರೀತ್ ಸಿಂಗ್ ಗುಂಡು ಹಾರಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಕಳೆದ ಶನಿವಾರದಂದು ಪರ್ಮಿಶ್ ವರ್ಮಾ ತನ್ನ ಸ್ನೇಹಿತನ ಜೊತೆ ಹೋಗುತ್ತಿರುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಪರ್ಮೀಶ್ ಹಾಗೂ ಅವರ ಸ್ನೇಹಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ‘ಗಾಲ್ ನಿ ಕದ್ನಿ’ ಹಾಡು ಪರ್ಮೀಶ್ ಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ಯುಟ್ಯೂಬ್ ನಲ್ಲಿ ಇದನ್ನು 118 ಮಿಲಿಯನ್ ಜನರು ವೀಕ್ಷಿಸಿದ್ದರು. ಗಾಯಕನ ಖ್ಯಾತಿ ಹೆಚ್ಚಿದ ಬೆನ್ನಲ್ಲೇ, ಭೂಗತ ಪಾತಕಿಗಳಿಂದ ಬೆದರಿಕೆಯೂ ಬರಲಾರಂಭಿಸಿತ್ತು. ಗುಂಡಿನ ದಾಳಿ ಬಳಿಕ ಫೇಸ್ ಬುಕ್ ನಲ್ಲಿ ತನ್ನ ಫೋಟೋ ಜೊತೆ ಪರ್ಮಿಶ್ ರ ಫೋಟೋವನ್ನೂ ಹಾಕಿದ್ದ ಭೂಗತ ಪಾತಕಿ ದಿಲ್ಪ್ರೀತ್ ಸಿಂಗ್, ತಾನೇ ಪರ್ಮಿಶ್ ಮೇಲೆ ಗುಂಡು ಹಾರಿಸಿದ್ದಾಗಿ ಹೇಳಿಕೊಂಡಿದ್ದ. ಇದೀಗ ಮತ್ತೆ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಪರ್ಮಿಶ್ ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.