alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯದಲ್ಲಿ ಹೇಗಿದೆ ಚಿತ್ರರಂಗದವರ ಸಕ್ಸಸ್…?

ಚಿತ್ರರಂಗ ಮತ್ತು ರಾಜಕೀಯ ಬೇರೆ ಕ್ಷೇತ್ರಗಳಾದರೂ, ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ. ರಾಜಕಾರಣದಲ್ಲಿದ್ದವರು ಚಿತ್ರರಂಗದಲ್ಲಿ, ಸಿನಿಮಾದಲ್ಲಿದ್ದವರು ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅದೇ ರೀತಿ ಅನೇಕರು ನಿರೀಕ್ಷಿತ ಯಶಸ್ಸು ಕಾಣದೇ ನಿರಾಸೆ ಅನುಭವಿಸಿದ್ದಾರೆ.

ತಮಿಳುನಾಡಿನಲ್ಲಿ ಕರುಣಾನಿಧಿ, ಎಂ.ಜಿ.ಆರ್., ಜಯಲಲಿತಾ ಅವರು ಚಿತ್ರರಂಗದಿಂದ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಗಳಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಎನ್.ಟಿ.ಆರ್. ಅವರು ಮುಖ್ಯಮಂತ್ರಿಯಾಗಿದ್ದರು. ಚಿರಂಜೀವಿ ಕೂಡ ಹೊಸ ಪಕ್ಷ ಸ್ಥಾಪಿಸಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟರೂ, ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಭಾರತೀಯ ಚಿತ್ರರಂಗದಲ್ಲಿ ಅನೇಕರು ಸಿನಿಮಾದ ಜೊತೆಗೆ ರಾಜಕಾರಣದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಮರೆಯಾಗಿದ್ದಾರೆ. ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ಹಲವಾರು ಮಂದಿ ರಾಜಕೀಯದಲ್ಲಿದ್ದಾರೆ. ವಿನೋದ್ ಖನ್ನಾ ಸಂಸದರಾಗಿದ್ದರು. ಸಚಿವೆ ಸ್ಮೃತಿ ಇರಾನಿ ಕಿರುತೆರೆಯಿಂದ ಬಂದವರಾಗಿದ್ದಾರೆ. ಶತ್ರುಘ್ನಸಿನ್ಹಾ, ಗೋವಿಂದ, ಜಯಾ ಬಚ್ಚನ್, ಜಯಪ್ರದಾ ಮೊದಲಾದವರು ರಾಜಕಾರಣದಲ್ಲಿ ಕಾಣಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಅನಂತ್ ನಾಗ್, ಅಂಬರೀಶ್, ಜಗ್ಗೇಶ್, ಸಚಿವೆ ಉಮಾಶ್ರೀ, ಜಯಮಾಲಾ, ತಾರಾ, ಭಾವನಾ, ಶಶಿಕುಮಾರ್ ಸೇರಿದಂತೆ ಅನೇಕರು ರಾಜಕಾರಣದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೆಲವರು ಯಶಸ್ಸಿನಲ್ಲಿ ಮುನ್ನಡೆದಿದ್ದಾರೆ. ಚಿತ್ರ ನಿರ್ಮಾಪಕರಾದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಅನಂತ್ ನಾಗ್, ಅಂಬರೀಶ್ ಸಚಿವರಾಗಿದ್ದರು. ಅದೇ ರೀತಿ ರಾಜಕಾರಣದಲ್ಲಿರುವ ಅನೇಕರು ಚಿತ್ರರಂಗದಲ್ಲಿಯೂ ತೊಡಗಿಕೊಂಡಿದ್ದಾರೆ.

ಇದೆಲ್ಲದರ ನಡುವೆ ಉಪೇಂದ್ರ ಅವರು ಹೊಸ ಚಿಂತನೆಯ ರಾಜಕಾರಣವನ್ನು ಪರಿಚಯಿಸಿದ್ದಾರೆ. ಈಗಾಗಲೇ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಿದ್ದ ಉಪೇಂದ್ರ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಗಳಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಕುರಿತಾಗಿ ಅನೇಕ ತಿಂಗಳಿಂದ ಚರ್ಚೆಯಾಗ್ತಿದೆ. ವರ್ಷದ ಕೊನೆಯ ದಿನ ರಜನಿಕಾಂತ್ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಚಿತ್ರರಂಗದವರು ಯಶಸ್ಸು ಗಳಿಸಿದ್ದಾರೆ. ಆದರೆ, ಈಗ ಕಾಲ ಬದಲಾಗಿದೆ.

ರಜನಿಕಾಂತ್ ಹಾದಿ ಸುಲಭವಾಗೇನೂ ಇಲ್ಲ. ಇದನ್ನು ಅವರೇ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...