alex Certify
ಕನ್ನಡ ದುನಿಯಾ       Mobile App
       

Kannada Duniya

ಫೆ.24 ರಂದು ದುಬೈ ಹೋಟೆಲ್ ನಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ತಮ್ಮ ಸಂಬಂಧಿಯ ವಿವಾಹಕ್ಕೆಂದು ದುಬೈಗೆ ತೆರಳಿದ್ದ ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ದುರಂತ ಸಾವಿಗೀಡಾಗಿದ್ದಾರೆ. ಅವರು ತಮ್ಮ ಹೋಟೆಲ್ ರೂಮಿನ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ದುಬೈನಲ್ಲಿನ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಬುಧವಾರದಂದು ಮುಂಬೈನ ವಿಲೇಪಾರ್ಲೆಯಲ್ಲಿರುವ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

ಶ್ರೀದೇವಿಯವರ ಸಾವನ್ನಪ್ಪಿದ ದಿನ ಫೆಬ್ರವರಿ 24 ರಂದು ಅಂದು ಸಂಜೆ ಹೋಟೆಲ್ ರೂಮಿನಲ್ಲಿ ನಡೆದಿದ್ದೇನು ಎಂಬುದರ ಸಂಪೂರ್ಣ ವಿವರವನ್ನು ಶ್ರೀದೇವಿ ಪತಿ ಬೋನಿ ಕಪೂರ್ ತಮ್ಮ ಸ್ನೇಹಿತ ಕೋಮಲ್ ನಹತಾ ಅವರ ಬಳಿ ಹೇಳಿಕೊಂಡಿದ್ದು, ಇದನ್ನು ನಹತಾ ತಮ್ಮ ಅಧಿಕೃತ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ.

ಸಂಬಂಧಿ ಮೋಹಿತ್ ಮಾರ್ವಾ ವಿವಾಹಕ್ಕೆ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಕಪೂರ್ ಜೊತೆ ತೆರಳಿದ್ದರು. ಮತ್ತೋರ್ವ ಪುತ್ರಿ ಜಾಹ್ನವಿ ಕಪೂರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಕಾರಣ ದುಬೈಗೆ ತೆರಳಿರಲಿಲ್ಲ. ವಿವಾಹ ಸಮಾರಂಭದಲ್ಲಿ ಸಡಗರದಿಂದ ಶ್ರೀದೇವಿ ಕುಟುಂಬ ಪಾಲ್ಗೊಂಡಿದ್ದು, ವಿವಾಹ ಸಮಾರಂಭದ ಬಳಿಕ ಲಕ್ನೋದಲ್ಲಿ ಮುಖ್ಯ ಸಭೆಯೊಂದು ಇದ್ದ ಕಾರಣ ಬೋನಿ ಕಪೂರ್ ಭಾರತಕ್ಕೆ ಮರಳಿದ್ದರು. ಅವರ ಜೊತೆ ಪುತ್ರಿ ಖುಷಿ ಸಹ ಬಂದಿದ್ದರು.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದ ಜಾಹ್ನವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಲು ಬಯಸಿದ್ದ ಶ್ರೀದೇವಿಯವರು ದುಬೈನ ಜುಮೇರಾ ಎಮಿರೇಟ್ಸ್ ಟವರ್ಸ್ ಹೋಟೆಲ್ ನ ರೂಂ ನಂ. 2201 ರಲ್ಲಿ ಉಳಿದುಕೊಂಡಿದ್ದರು. ಶ್ರೀದೇವಿ ಇದೇ ಮೊದಲ ಬಾರಿಗೆ ದುಬೈನಲ್ಲಿ ಒಬ್ಬಂಟಿಯಾಗಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದು, ಆದರೆ ಅವರ ಮರೆವಿನ ಅರಿವಿದ್ದ ಪುತ್ರಿ ಜಾಹ್ನವಿ ಪಾಸ್ಪೋರ್ಟ್ ಸೇರಿದಂತೆ ಮುಖ್ಯ ದಾಖಲೆಗಳನ್ನು ಕಳೆದುಕೊಂಡು ಬಿಟ್ಟಾರೂ ಎಂದು ತಂದೆ ಬಳಿ ಆತಂಕ ವ್ಯಕ್ತಪಡಿಸಿದ್ದರು.

ಫೆಬ್ರವರಿ 24 ರಂದು ಬೆಳಿಗ್ಗೆ ಬೋನಿ ಕಪೂರ್ ಶ್ರೀದೇವಿಯವರಿಗೆ ಕರೆ ಮಾಡಿದ್ದು, ಅವರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಬೋನಿ ಕಪೂರ್ ಮುಂಬೈನಲ್ಲಿನ ಕೆಲ ಕೆಲಸಗಳನ್ನು ಪೂರೈಸಿದ ಬಳಿಕ ಪತ್ನಿಗೆ ಸರ್ಪ್ರೈಸ್ ನೀಡಲೆಂದು 3-30 ರ ಫ್ಲೈಟ್ ಗೆ ದುಬೈ ಟಿಕೇಟ್ ಬುಕ್ ಮಾಡಿಸಿದ್ದು, ಅಲ್ಲಿಗೆ ತೆರಳಿದ್ದಾರೆ. ದುಬೈ ಕಾಲಮಾನ 6-20 ರ ಸುಮಾರಿಗೆ ಶ್ರೀದೇವಿಯವರ ಹೋಟೆಲ್ ರೂಮಿಗೆ ಬೋನಿ ಕಪೂರ್ ಹೋಗಿದ್ದು, ಪತಿಯನ್ನು ಕಾಣುತ್ತಲೇ ಶ್ರೀದೇವಿಯವರ ಸಂಭ್ರಮ ಇಮ್ಮಡಿಸಿದೆ.

ಪತಿ-ಪತ್ನಿ ಲಿವಿಂಗ್ ರೂಮಿನಲ್ಲಿ ಕುಳಿತು ಮಾತನಾಡಿದ್ದು, ಬಳಿಕ ಡಿನ್ನರ್ ಗೆ ಹೊರಗೆ ಹೋಗಲು ನಿರ್ಧರಿಸಿದ್ದಾರೆ. ಸ್ನಾನ ಮಾಡಿ ಬರುವುದಾಗಿ ಹೇಳಿದ ಶ್ರೀದೇವಿ ಬಾತ್ ರೂಮಿಗೆ ಹೋದರೆ ಬೋನಿ ಕಪೂರ್ ಟಿವಿ ವೀಕ್ಷಿಸುತ್ತಾ ಕುಳಿತಿದ್ದಾರೆ. ಭಾರತ- ದಕ್ಷಿಣ ಅಫ್ರಿಕಾ ತಂಡದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ ಬೋನಿ ಕಪೂರ್ ಎಷ್ಟು ಹೊತ್ತಾದರೂ ಶ್ರೀದೇವಿ ಹೊರ ಬಾರದ ಕಾರಣ ಲಿವಿಂಗ್ ರೂಮಿನಿಂದಲೇ ಜೋರಾಗಿ ಕೂಗಿದ್ದಾರೆ. ಆದರೆ ಯಾವುದೇ ಉತ್ತರ ಬಂದಿಲ್ಲ. ಟಿವಿ ಸೌಂಡ್ ಕಮ್ಮಿ ಮಾಡಿ ಮತ್ತೊಮ್ಮೆ ಬೋನಿ ಕಪೂರ್ ಕೂಗಿದರೂ ಪ್ರಯೋಜನವಾಗಿಲ್ಲ.

ಕಡೆಗೆ ಬೋನಿ ಕಪೂರ್ ಬಾತ್ ರೂಂ ಬಳಿ ತೆರಳಿ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಬೋನಿ ಕಪೂರ್ ಬಾತ್ ರೂಂ ಬಾಗಿಲು ತಳ್ಳಲು ಯತ್ನಿಸಿದ್ದು, ಒಳಗಿನಿಂದ ಲಾಕ್ ಆಗಿರದ ಕಾರಣ ಸುಲಭವಾಗಿ ತೆರೆದುಕೊಂಡಿದೆ. ಒಳ ನೋಡಿದ ಬೋನಿ ಕಪೂರ್ ಬೆಚ್ಚಿ ಬಿದ್ದಿದ್ದಾರೆ. ಬಾತ್ ಟಬ್ ನೀರಿನಲ್ಲಿ ಶ್ರೀದೇವಿ ಸಂಪೂರ್ಣವಾಗಿ ಮುಳುಗಿರುವುದು ಕಂಡು ಬಂದಿದೆ. ಗಾಬರಿಗೊಂಡ ಬೋನಿ ಕಪೂರ್ ಆಕೆಯನ್ನು ಮೇಲೆ ಎತ್ತಿ ಎಚ್ಚರಿಸಲು ಯತ್ನಿಸಿದರೂ ಯಾವುದೇ ಚಲನೆ ಕಂಡು ಬಂದಿಲ್ಲ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆದರೆ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಎಲ್ಲ ವಿವರವನ್ನು ಕೋಮಲ್ ನಹತಾ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...