alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ಚಿತ್ರರಂಗದಲ್ಲಿ ಭಾರತ..! 

slumdog_millionaire

ಹಾಲಿವುಡ್ ! ಅದೊಂದು ಮಾಯಾಲೋಕ. ಅಮೆರಿಕಾದ ಲಾಸ್ ಏಂಜಲಿಸ್ ನಲ್ಲಿರುವ ಹಾಲಿವುಡ್ ಚಲನಚಿತ್ರ ನಿರ್ಮಾಣಕ್ಕೆ ಪ್ರಸಿದ್ಧಿ. ಅದ್ದೂರಿ ಬಜೆಟ್, ಚಿತ್ರವಿಚಿತ್ರ ಕತೆಗಳು, ಗ್ರಾಫಿಕ್ಸ್, ಅತ್ಯುನ್ನತ ತಂತ್ರಜ್ಞಾನಗಳಿಂದ ಕೂಡಿರುವ ಹಾಲಿವುಡ್ ಚಿತ್ರಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ. ಒಮ್ಮೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳಯಾನದ ಯಶಸ್ಸಿನ ನಂತರ , ‘ನಾವು ಗ್ರ್ಯಾವಿಟಿ ಸಿನೆಮಾದ ಬಜೆಟ್ ಗಿಂತಲೂ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಮಾಡಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈ ಮಾತಿನ ಹಿಂದೆ ನಮಗೆ ಹಾಲಿವುಡ್ ಚಿತ್ರಗಳ ಬಜೆಟ್ ಹೇಗಿರುತ್ತದೆ ಎಂದು ಅರಿವಾಗುತ್ತದೆ.

ಇಡೀ ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸಿದ ‘ಅವತಾರ್’ ಸಿನೆಮಾದ ಬಜೆಟ್ ಎಷ್ಟು ಗೊತ್ತಾ? 1600 ಕೋಟಿ ರೂಪಾಯಿ. ಇಂತಹ ಹಾಲಿವುಡ್ ನಲ್ಲಿ ಭಾರತದ ಬಗ್ಗೆ ಅನೇಕ ಸಿನೆಮಾಗಳನ್ನು ಮಾಡಲಾಗಿದೆ. ಹಾಲಿವುಡ್ ಮಂದಿಗೆ ಭಾರತದ ಸಂಸ್ಕೃತಿ, ಆಧ್ಯಾತ್ಮ, ಆಚಾರ ವಿಚಾರಗಳ ಬಗ್ಗೆ ಅದೇನೋ ಕುತುಹಲ. ಬನ್ನಿ, ಭಾರತದ ಕತೆಯನ್ನು ಒಳಗೊಂಡಿರುವ ಕೆಲವು ಹಾಲಿವುಡ್ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಗಾಂಧಿ (1982)

gandhi

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನಗಾಥೆಯನ್ನು ತೆರೆಯ ಮೇಲೆ ತರಲು ಹಾಲಿವುಡ್ ಮುಂದಾಯಿತು. ಈ ಚಿತ್ರದ ನಿರ್ದೇಶಕರಾದ ರಿಚರ್ಡ್ ಅಟೆನ್ ಬರೋ ಗಾಂಧೀಜಿಯವರ ಕುರಿತು ಸಿನೆಮಾ ಮಾಡಲು 18 ವರ್ಷಗಳ ಕಾಲ ಶ್ರಮಪಟ್ಟಿದ್ದರು. ಗಾಂಧೀಜಿಯವರ ಪಾತ್ರವನ್ನು ಖ್ಯಾತ ಹಾಲಿವುಡ್ ನಟ ಬೆನ್ ಕಿಂಗ್ ಸ್ಲೇ ಅದ್ಬುತವಾಗಿ ನಿರ್ವಹಿಸಿದ್ದರು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವರ್ಣ ತಾರತಮ್ಯಕ್ಕೆ ಒಳಗಾಗಿ ಅಧಿಕಾರಿಗಳಿಂದ ಹೊರದಬ್ಬಿಸಿಕೊಳ್ಳುವ ದೃಶ್ಯದಿಂದ ಆರಂಭವಾಗಿ ಅವರ ಅಂತ್ಯಕ್ರಿಯೆ ನಡೆಯುವ ಸನ್ನಿವೇಶದವರೆಗೂ ಸಿನೆಮಾ ಸಾಗುತ್ತದೆ. 1982 ರಲ್ಲಿ ಬಿಡುಗಡೆಗೊಂಡ ಈ ಸಿನೆಮಾ ಇಡೀ ಜಗತ್ತಿನಾದ್ಯಂತ ಉತ್ತಮ ಪ್ರಶಂಸೆ ಪಡೆಯಿತು. 22 ಮಿಲಿಯನ್ ಡಾಲರ್ ಬಜೆಟ್ಟಿನ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ 128 ಮಿಲಿಯನ್ ಡಾಲರ್ ಬಾಚಿಕೊಂಡಿತು. 1983 ರಲ್ಲಿ 11 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಈ ಚಿತ್ರ ಬರೋಬ್ಬರಿ 8 ಪ್ರಶಸ್ತಿಗಳನ್ನು ಗೆದ್ದುಬೀಗಿತು.ಇದರಲ್ಲಿ ಈ ಚಿತ್ರಕ್ಕೆ ಅದ್ಭುತವಾಗಿ ವಸ್ತ್ರವಿನ್ಯಾಸ ಮಾಡಿದ್ದ ಭಾರತದ ಭಾನು ಅಥೈಯಾ ಕೂಡಾ ಆಸ್ಕರ್ ಪಡೆದುಕೊಂಡರು.

ಸ್ಲಂ ಡಾಗ್ ಮಿಲಿಯನರ್ (2008)

slumdog_millionaire

ಬ್ರಿಟಿಷ್ ನಿರ್ದೇಶಕ ಡ್ಯಾನಿ ಬಾಯ್ಲ್ ನಿರ್ದೇಶನದ ‘ ಸ್ಲಂ ಡಾಗ್ ಮಿಲಿಯನರ್’ 2008 ರಲ್ಲಿ ಇಡೀ ವಿಶ್ವದಾದ್ಯಂತ ಸದ್ದು ಮಾಡಿದ ಸಿನೆಮಾ. ಭಾರತದ ಲೇಖಕ ವಿಕಾಸ್ ಸ್ವರೂಪ್ ರವರ ಕಾದಂಬರಿ ‘Q & A’ ಆಧಾರಿತ ಈ ಸಿನೆಮಾದಲ್ಲಿ ಭಾರತೀಯ ಕಲಾವಿದರಾದ ದೇವ್ ಪಟೇಲ್, ಫ್ರಿಡಾ ಪಿಂಟೋ, ಅನಿಲ್ ಕಪೂರ್, ಮಧುರ್ ಮಿತ್ತಲ್ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ.

18 ವರ್ಷದ ಮುಂಬೈನ ಸ್ಲಂ ಯುವಕನೊಬ್ಬ ಜನಪ್ರಿಯ ಕಾರ್ಯಕ್ರಮ ಕೋಟ್ಯಾಧಿಪತಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರತಿ ಉತ್ತರದ ಹಿಂದೆಯೂ ಅವನ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಮೆಲುಕು ಹಾಕುತ್ತಾ ಏಕೆ ತಾನು ಹೇಳುವ ಉತ್ತರ ಸರಿಯೆಂಬುದನ್ನು ಸಾಬೀತು ಮಾಡಿ ಕೊನೆಗೆ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಗೆಲ್ಲುತ್ತಾನೆ. ಇದು ಈ ಚಿತ್ರದ ತಿರುಳು.

15 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಭರ್ಜರಿ 378 ಮಿಲಿಯನ್ ಡಾಲರ್ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿತು. 2009 ರಲ್ಲಿ ಆಸ್ಕರ್ ಅಂಗಳದಲ್ಲೂ ಸದ್ದು ಮಾಡಿದ ಈ ಸಿನೆಮಾ 8 ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಈ ಸಿನೆಮಾಗೆ ಅದ್ಬುತವಾಗಿ ಸೌಂಡ್ ಮಿಕ್ಸಿಂಗ್ ಮಾಡಿದ್ದ ರಸೂಲ್ ಪೂಕುಟ್ಟಿ, ಸಂಗೀತ ನಿರ್ದೇಶನ ಮಾಡಿದ್ದ ಎ.ಆರ್. ರೆಹಮಾನ್, ಈ ಚಿತ್ರದ ಜನಪ್ರಿಯ ಹಾಡು ‘ಜೈ ಹೋ’ ರಚಿಸಿದ್ದ ಗುಲ್ಜಾರ್ ಸಹ ಆಸ್ಕರ್ ಪ್ರಶಸ್ತಿಗೆ ಭಾಜನರಾದರು.

ಲೈಫ್ ಆಫ್ ಪೈ (2012)

life_of_pi

ಕೆನಡಾದ ಪ್ರಸಿದ್ಧ ಮ್ಯಾನ್ ಬುಕರ್ ವಿಜೇತ  ಕಾದಂಬರಿಕಾರ ಯನ್ನ ಮಾರ್ಟೇಲ್ (Yann Martel) ಅವರ ‘ಲೈಫ್ ಆಫ್ ಪೈ’ ಕಾದಂಬರಿಯನ್ನು  ತೆರೆಯ ಮೇಲೆ ತಂದವರು ಆಂಗ್ ಲೀ (Ang Lee). 2012 ರಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಭಾರತೀಯ ಕಲಾವಿದರಾದ ಸೂರಜ್ ಶರ್ಮಾ, ತಬು, ಇರ್ಫಾನ್ ಖಾನ್ , ಆದಿಲ್ ಹುಸೇನ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ತಾರಾಗಣದಲ್ಲಿದ್ದರು.

ಪಾಂಡೀಚೆರಿಯ 16 ವರ್ಷದ ಯುವಕ ಆಧ್ಯಾತ್ಮಿಕ ಹಾಗೂ ಸಂಪ್ರದಾಯಶೀಲ ವಾತಾವರಣದಲ್ಲಿ ಬೆಳೆದಿರುತ್ತಾನೆ. ಅವನ ತಂದೆ ಮೃಗಾಲಯವೊಂದರ ಮಾಲೀಕನಾಗಿರುತ್ತಾನೆ. ಒಮ್ಮೆ ಪಾಂಡಿಚೇರಿಯಲ್ಲಿ ಉಂಟಾಗುವ ಪ್ರವಾಹವೊಂದರ ಹಡಗು ದುರಂತದಲ್ಲಿ ತನ್ನ ಕುಟುಂಬವನ್ನು ಕಳೆದುಕೊಳ್ಳುವ ಯುವಕ ದೋಣಿಯೊಂದರಲ್ಲಿ ಉಳಿದುಕೊಳ್ಳುತ್ತಾನೆ. ಆ ದೋಣಿಯಲ್ಲಿ ಝೀಬ್ರಾ, ಹೆಸರಗತ್ತೆ, ಓರಂಗುಟಮ್, ಹುಲಿ ಸೇರಿದಂತೆ ಅದರಲ್ಲಿ ಉಳಿದುಕೊಂಡಿರುತ್ತವೆ. ಕೊನೆಗೆ ಹುಲಿಯೊಂದನ್ನು ಬಿಟ್ಟು ಎಲ್ಲ ಪ್ರಾಣಿಗಳು ಹತವಾಗುತ್ತವೆ.

ಹೀಗೆ ಹುಲಿ ಮತ್ತು ಯುವಕ ಇಬ್ಬರು 227 ದಿನಗಳ ಕಾಲ ಸಮುದ್ರದಲ್ಲಿ ಸುತ್ತುವಾಗ ಯುವಕ ಆಧ್ಯಾತ್ಮಿಕತೆ ಮತ್ತು ವಾಸ್ತವಗಳ ನಡುವೆ ಹೊಯ್ದಾಡುವ ಕತೆಯೇ ಈ ಚಿತ್ರದ ತಿರುಳು. ಒಟ್ಟು 120 ಮಿಲಿಯನ್ ಡಾಲರ್ ಬಜೆಟ್ ನ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ  609 ಮಿಲಿಯನ್ ಡಾಲರ್ ದೋಚಿತು. 2013 ರಲ್ಲಿ 11 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಈ ಚಿತ್ರ 4 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ದಿ ಜಂಗಲ್ ಬುಕ್ (2016)

jungle_book_ver5_xlg

ಭಾರತೀಯರಿಗೆ ಜಂಗಲ್ ಬುಕ್ ಕತೆ ಹೊಸದೇನೂ ಅಲ್ಲ. ಅಷ್ಟಕ್ಕೂ ಜಂಗಲ್ ಬುಕ್ ಗೂ ಹಾಗೂ ಭಾರತಕ್ಕೂ ಇರುವ ಸಂಬಂಧವಾದರೂ ಏನು ಎಂದು ನೀವು ಕೇಳಬಹುದು.ಈ ಕತೆ ಬರೆದವರು ವಿಶ್ವವಿಖ್ಯಾತ ಲೇಖಕ ರುಡ್ ಯಾರ್ಡ್ ಕಿಪ್ಲಿಂಗ್. ಅವರ ತಂದೆ ಬ್ರಿಟೀಷರ ಕಾಲದಲ್ಲಿ ಭಾರತದಲ್ಲಿ ಅಧಿಕಾರಿಯಾಗಿದ್ದರು. ಹೀಗಾಗಿ ಭಾರತದಲ್ಲೇ ಜನ್ಮ ತಾಳುವ ಕಿಪ್ಲಿಂಗ್ ಅವರು ಬಾಲ್ಯಜೀವನವನ್ನು  ಭಾರತದಲ್ಲೇ ಕಳೆಯುತ್ತಾರೆ.

ಆ ಸಮಯದಲ್ಲಿ ಅವರ ಮೇಲೆ ಪಂಚತಂತ್ರ, ಹಿತೋಪದೇಶ ಕತೆಗಳು ಪ್ರಭಾವ ಬೀರುತ್ತವೆ. ಅದೇ ಕಾರಣಕ್ಕೆ ಜಂಗಲ್ ಬುಕ್ನಲ್ಲಿ ಬರುವ ಪಾತ್ರಗಳ ಹೆಸರುಗಳೆಲ್ಲ ಭಾರತೀಯ ಹೆಸರುಗಳಿಂದ ಕೂಡಿವೆ. 2016 ರಲ್ಲಿ ನಿರ್ದೇಶಕ ಜಾನ್ ಫಾವರಿನ್ (Jon Favrean) ಈ ಜಗತ್ಪ್ರಸಿದ್ಧ ಕತೆಯನ್ನು ತೆರೆಯ ಮೇಲೆ ತರುತ್ತಾರೆ. ಈ ಚಿತ್ರದಲ್ಲಿ ಬರುವ ಅನೇಕ ಪ್ರಾಣಿಗಳ ಪಾತ್ರಗಳಿಗೆ ಹಾಲಿವುಡ್ ನಟರಾದ ಬೆನ್ ಕಿಂಗ್ ಸ್ಲೇ, ಬಿಲ್ಲ್ ಮರ್ರೆ, ಸ್ಕಾರ್ಲೆಟ್ಟ್ ಜೋಹಾನ್ಸನ್, ಇದ್ರಿಸ್ ಎಲ್ಬಾ ಸೇರಿದಂತೆ ಅನೇಕರು ಕಂಠದಾನ ಮಾಡಿದ್ದಾರೆ.

ಈ ಚಿತ್ರದಲ್ಲಿ ಮೌಗ್ಲಿ ಪಾತ್ರವನ್ನು ನೀಲ್ ಸೇಠ್ ಎಂಬ ಭಾರತೀಯ ಸಂಜಾತ ಬಾಲನಟ ಅದ್ಭುತವಾಗಿ ನಿರ್ವಹಿಸಿದ್ದಾನೆ. ಒಟ್ಟು 175 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ವಿಶ್ವದಾದ್ಯಂತ 1000 ಮಿಲಿಯನ್ ಡಾಲರ್ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯನ್ನು ಬರೆಯಿತು. ಭಾರತದಲ್ಲಿ 100 ಕೋಟಿ ಗಳಿಸಿದ ಹಾಲಿವುಡ್ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಚಿತ್ರ Best visual effects ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಲಯನ್ (2016)

lion_2016_film

ಲಯನ್ ಚಿತ್ರವು ಸಾರೂ ಬ್ರೀರ್ಲೆ ಅವರ ಆತ್ಮಕಥನ ‘ A long way home’ ಪುಸ್ತಕವನ್ನು ಆಧರಿಸಿದೆ. ಭಾರತದ ಹಳ್ಳಿಯಲ್ಲಿರುವ 6 ವರ್ಷದ ಪುಟ್ಟಬಾಲಕ ಅಚಾನಕ್ಕಾಗಿ ತಪ್ಪಿಸಿಕೊಂಡು ರೈಲಿನಲ್ಲಿ ಕೋಲ್ಕತ್ತಾವನ್ನು ಸೇರಿಕೊಳ್ಳುತ್ತಾನೆ. ಹೀಗೆ ತನ್ನ ಅಣ್ಣ ಹಾಗೂ ಕುಟುಂಬದಿಂದ ಬೇರ್ಪಡುವ ಆ ಪುಟ್ಟ ಪೋರ ಕೋಲ್ಕತ್ತಾದಲ್ಲಿರುವ ಅನಾಥಾಶ್ರಮ ಸೇರಿಕೊಳ್ಳುತ್ತಾನೆ. ಅಲ್ಲಿ ಅವನನ್ನು ಆಸ್ಟ್ರೇಲಿಯಾದ ದಂಪತಿಗಳು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗುತ್ತಾರೆ.  ಆ ಹುಡುಗ ದೊಡ್ಡವನಾದಾಗ ತನ್ನ ಕುಟುಂಬವನ್ನು ಹುಡುಕುವ ಸಲುವಾಗಿ ಭಾರತಕ್ಕೇ ಬರುತ್ತಾನೆ. ಕೊನೆಗೂ 23 ವರ್ಷಗಳ ನಂತರ ತನ್ನ ಕುಟುಂಬವನ್ನು ಸೇರಿಕೊಳ್ಳಲು ಸಫಲನಾಗುತ್ತಾನೆ.

ಈ ಹೃದಯಸ್ಪರ್ಶಿ ಕತೆಯನ್ನು ತೆರೆಯ ಮೇಲೆ ತಂದವರು ಗಾರ್ಥ್ ಡೇವಿಸ್ ( Garth Davis). ಇದೊಂದು 1986 ರಲ್ಲಿ ನಡೆದ ಸತ್ಯಕತೆ ಆಧರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಸನ್ನಿ ಪವಾರ್, ದೇವ್ ಪಟೇಲ್, ರೂನಿ ಮಾರ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಒಟ್ಟು 12 ಮಿಲಿಯನ್ ಡಾಲರ್ ಬಜೆಟ್ ನ ಈ ಚಿತ್ರ ವಿಶ್ವದಾದ್ಯಂತ 137 ಮಿಲಿಯನ್ ಡಾಲರ್ ಗಳಿಸಿತು. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಈ ಸಿನೆಮಾ ಒಟ್ಟು 6 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ದಿ ಮ್ಯಾನ್ ವ್ಹೂ ನೆವ್ ಇಂಫಿನಿಟಿ (2015)

man_who_knew_infinity

ನಮ್ಮ ದೇಶದ ಸಿನೆಮಾ ಮಂದಿ ಕ್ರಿಕೆಟ್ ಆಟಗಾರರ ಹಾಗೂ ಬಾಲಿವುಡ್ ನಟ-ನಟಿಯರ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತರಲು ಉತ್ಸಾಹ ತೋರುತ್ತಿದ್ದಾಗ ಅತ್ತ ಕಡೆ ಸದ್ದಿಲ್ಲದೇ ಹಾಲಿವುಡ್, ಭಾರತದ ಜೀನಿಯಸ್ ಒಬ್ಬರ ಜೀವನ ಕುರಿತ  ಚಿತ್ರವನ್ನು ತೆರೆಯ ಮೇಲೆ ತಂದಿತು.

ಅದು ಚಿಕ್ಕವಯಸ್ಸಿನಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಭಾರತದ ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರ ಜೀವನ ಚರಿತ್ರೆಯಾಗಿತ್ತು. ಶ್ರೀನಿವಾಸನ್ ಪಾತ್ರವನ್ನು ದೇವ್ ಪಟೇಲ್ ನಿರ್ವಹಿಸಿದ್ದರೆ ಜಿ.ಹೆಚ್. ಹಾರ್ಡಿಯವರ ಪಾತ್ರವನ್ನು ಜೆರೆಮಿ ಐರನ್ ನಿರ್ವಹಿಸಿದ್ದರು. ಮ್ಯಾಥ್ಯೂ ಬ್ರೌನ್ ಈ ಚಿತ್ರದ ನಿರ್ದೇಶಕರು. 2015 ರಲ್ಲಿ ಬಿಡುಗಡೆಗೊಂಡ ಈ ಚಿತ್ರ 6 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ಲೇಖಕರು : ಹನಮಂತ ಕೊಪ್ಪದ, ವಿಜಯಪುರ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...