alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿಗರನ್ನು ಸೆಳೆಯುತ್ತಿದೆ ‘ಬಾಲಿವುಡ್ ಡಾನ್ಸ್’

ವಿಭಿನ್ನ, ವೈವಿಧ್ಯ ಸಂಗೀತಕ್ಕೆ, ನೃತ್ಯಕ್ಕೆ ನೆಲೆವೀಡಾಗಿರುವ ನಮ್ಮ ದೇಶದ ಮನೋರಂಜನಾ ಜಗತ್ತು ಅತ್ಯಂತ ವಿಶಾಲವಾಗಿದೆ. ನಮ್ಮ ಸಿನಿಮಾ ಜಗತ್ತು ನಮ್ಮದೇ ಸಾಂಪ್ರದಾಯಿಕ ನೃತ್ಯಗಳ ಜೊತೆ ಪಾಶ್ಚಾತ್ಯ ನೃತ್ಯಗಳನ್ನೂ ಬೆರೆಸಿ ಅದರದ್ದೇ ಆದ ಹೊಸ ನೃತ್ಯ ಪ್ರಕಾರವನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಎಲ್ಲ ಪ್ರಕಾರಗಳ ನೃತ್ಯಗಳ ಬೆರಕೆಯಿಂದ ಸಿನಿಮಾ ನೃತ್ಯ ಅನ್ನೋ ಹೊಸ ಪ್ರಕಾರ ಹುಟ್ಟಿಕೊಂಡಿದೆ. ಈ ವಿಶಿಷ್ಟ ನೃತ್ಯ ಅದರೊಂದಿಗಿರುವ ಅಟ್ರಾಕ್ಟೀವ್ ಸಂಗೀತ ಇಡೀ ಜಗತ್ತನ್ನೇ ಸೆಳೆಯುತ್ತಿದೆ.

ಭಾರತೀಯ ಸಿನಿಮಾ ಸಂಗೀತ ಮತ್ತು ನೃತ್ಯ ನಿಜಕ್ಕೂ ವಿಶಿಷ್ಟ. ಜಗತ್ತಿನ ಎಲ್ಲ ಸಂಗೀತ ಮತ್ತು ನೃತ್ಯಗಳನ್ನ ಬೆರೆಸಿ ಸೃಷ್ಟಿಸಲಾದ ಇಂಡಿಯನ್​ ಫಿಲ್ಮೀ ಡಾನ್ಸ್​ ಸಾಮಾನ್ಯವಾಗಿ ಜಗತ್ತಿನ ಎಲ್ಲ ದೇಶದ ಜನರಿಗೂ ಇಷ್ಟವಾಗುತ್ತೆ. ನಮ್ಮ ಕ್ಲಾಸಿಕಲ್​ ನೃತ್ಯ ಪ್ರಕಾರಗಳನ್ನೇ ಅಭ್ಯಾಸ ಮಾಡೋ ಆಸಕ್ತ ಫಾರಿನ್​ ಜನರ ಗುಂಪು ಒಂದೆಡೆಯಾದ್ರೆ, ನಮ್ಮ ಸಿನಿಮಾ ಹಾಡುಗಳಲ್ಲಿರುವ ಜೋಷ್​ ಮತ್ತು ವಿಶಿಷ್ಟತೆಯಿಂದ ಆಕರ್ಷಿತರಾಗಿರುವ ವಿದೇಶಿಗರ ಗುಂಪೇ ಇನ್ನೊಂದೆಡೆ. 

ಬಾಲಿವುಡ್​ ಹಾಡು ಎಲ್ಲಿಯಾದ್ರೂ ಪ್ರಸಾರವಾಗ್ತಿದೆ ಅಂದ್ರೆ, ನಮ್ಮ ಕಿವಿ ಒಮ್ಮೆ ನೆಟ್ಟಗಾಗುತ್ತೆ. ಬಾಲಿವುಡ್​ ಹಾಡುಗಳ ಅಟ್ರಾಕ್ಷನ್ನೇ ಹಾಗೆ. ಬಾಲಿವುಡ್​ ಒಂದೇ ಅಂತಲ್ಲ, ಸಾಮಾನ್ಯವಾಗಿ ನಮ್ಮ ದೇಶದ ಎಲ್ಲ ಭಾಷೆಯ ಸಿನಿಮಾ ಕ್ಷೇತ್ರಗಳೂ ಅಷ್ಟೆ, ಹಾಡುಗಳ ಬಗ್ಗೆ ಸ್ವಲ್ಪ ಜಾಸ್ತಿನೇ ಗಮನ ಕೊಟ್ಟಿರ್ತಾರೆ. ಹಾಡುಗಳನ್ನ ಆದಷ್ಟು ಅದ್ಧೂರಿಯಾಗಿ ಕಟ್ಟಿಕೊಟ್ಟಿರ್ತಾರೆ. ಹೀಗಾಗಿಯೇ ನಮ್ಮ ಬಾಲಿವುಡ್​ ಸಾಂಗ್ಸ್​, ಬಾಲಿವುಡ್​ ಡಾನ್ಸ್​ ಸ್ಟೈಲ್​ ಇಡೀ ಜಗತ್ತನ್ನೇ ಸೆಳೆದಿದೆ. ನೀವು ನಂಬ್ತೀರೋ ಬಿಡ್ತೀರೋ ಪಾಪ್​ ಲೋಕದಲ್ಲಿ ವರ್ಲ್ಡ್​ ವೈಡ್​ ಹೆಸರು ಮಾಡಿರೋ, ಪಾಪ್​ ಕ್ವೀನ್​ ಶಕೀರಾ ಕೂಡ, ಬಾಲಿವುಡ್​ ಸ್ಟೈಲ್​ ನಲ್ಲಿ ಸ್ಟೆಪ್ಸ್ ಹಾಕಿ ಪರ್ಫಾರ್ಮ್ ಮಾಡಿದ್ರು.

2006 ರಲ್ಲಿ ನಡೆದ ಎಂ​ಟಿವಿ ಅವಾರ್ಡ್​ ಫಂಕ್ಷನ್​ ನಲ್ಲಿ ಪಾಪ್​ ಕ್ವೀನ್​ ಶಕೀರಾ ಬಾಲಿವುಡ್​ ಥೀಮ್​ ನಲ್ಲಿ ಸ್ಟೇಜ್ ​ಗೆ ಎಂಟ್ರಿ ಕೊಟ್ಟಿದ್ರು. ಶಕೀರಾ ಬಾಲಿವುಡ್​ ಸ್ಟೈಲ್​​ನಲ್ಲಿ ಕಾಣಿಸಿಕೊಳ್ತಿದ್ದಂತೆ, ಶಕೀರಾ ಅಭಿಮಾನಿಗಳಿಗೆ ಹುಚ್ಚುಹಿಡಿದಂತಾಗಿತ್ತು. ನಮ್ಮವರಿಗೆಲ್ಲ ಬಾಲಿವುಡ್​ ಸ್ಟೈಲ್​ನಲ್ಲಿ ಶಕೀರಾ ಡಾನ್ಸ್ ನೋಡಿ ಅಚ್ಚರಿಯ ಜೊತೆ ಖುಷಿಯೂ ಆಗಿತ್ತು. ಇತ್ತೀಚೆಗೆ ನಮ್ಮ ಎಲ್ಲ ಸಿನಿಮಾಗಳು ವಿದೇಶಗಳಲ್ಲಿಯೂ ಬಿಡುಗಡೆಯಾಗೋದ್ರಿಂದ ವಿದೇಶಿ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬಾಲಿವುಡ್​ ಬಗ್ಗೆ ಆಸಕ್ತಿ ವಿದೇಶದಲ್ಲಿ ಜಾಸ್ತಿಯಾಗ್ತಿದೆ. 

ನಮ್ಮ ಸಿನಿಮಾಗಳ ನೃತ್ಯವನ್ನ ನೋಡಿ, ಅದೇ ರೀತಿ ನೃತ್ಯ ಮಾಡ್ತಾ ಈ ನಮ್ಮ ನೃತ್ಯಕ್ಕೆ ‘ಬಾಲಿವುಡ್​ ಸ್ಟೈಲ್​ ಡಾನ್ಸ್’​ ಅಂತ್ಲೇ ಹೆಸರಿಟ್ಟುಬಿಟ್ಟಿದ್ದಾರೆ ವಿದೇಶಿಗರು. ಅಂದ್ಹಾಗೆ, ಈಗ ವಿಶ್ವದಾದ್ಯಂತ ಬಾಲಿವುಡ್​ ಸ್ಟೈಲ್​ ಡಾನ್ಸ್ ಅಂತ್ಲೇ ನಮ್ಮ ಸಿನಿಮೀಯ ನೃತ್ಯಶೈಲಿಗಳು ಫೇಮಸ್​ ಆಗ್ಬಿಟ್ಟಿವೆ.  ಪರಿಣಾಮ, ವಿದೇಶಿ ಯುವಕರು ಬಾಲಿವುಡ್​ ಹಾಡಿಗೆ ಬಾಲಿವುಡ್​ ಸ್ಟೈಲ್ ​ನಲ್ಲಿಯೇ ಸ್ಟೆಪ್ಸ್​ ಹಾಕಿ ಪರ್ಫಾಮ್​ ಮಾಡೋದಕ್ಕಾಗಿ ಬಾಲಿವುಡ್ ಸ್ಟೈಲ್‌ ನೃತ್ಯವನ್ನ ಕಲಿಸುವ ಇಂಡಿಯನ್‌ ಡಾನ್ಸರ್ಸ್‌‌ ಗಳನ್ನ ಹುಡುಕಿಕೊಂಡು ಬರುತ್ತಿದ್ದಾರಂತೆ​. ಇದಕ್ಕೊಂದು ಉದಾಹರಣೆ ಅಂದರೆ, ರಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಡಾನ್ಸರ್ ಮಯೂರಿ​. ಇವರು ರಷ್ಯಾದಲ್ಲಿ ಬಾಲಿವುಡ್​ ಸ್ಟೈಲ್​ ನೃತ್ಯವನ್ನ ಅಲ್ಲಿಯ ಆಸಕ್ತರಿಗೆ ಕಲಿಸ್ತಾ ಇದ್ದಾರೆ. ರಷಿಯನ್‌ ಯುವಕ- ಯುವತಿಯರೂ ಕೂಡ ಅಷ್ಟೇ ಶ್ರದ್ಧೆಯಿಂದ ನಮ್ಮ ದೇಶದ ಬಾಲಿವುಡ್​ ಸ್ಟೈಲ್​ ಡಾನ್ಸ್ ​ನ್ನ ಕಲಿಯುತ್ತಾರಂತೆ.

ಫಿನ್‌ ಲ್ಯಾಂಡ್‌ನಲ್ಲಿ ಭಾರತೀಯ ಸಿನಿಮಾ ನೃತ್ಯವನ್ನ ಆಸಕ್ತರಿಗೆ ಕಲಿಸುತ್ತಿರುವ ಇನ್ನೊಬ್ಬ ನೃತ್ಯಪಟು ಡ್ಯಾನಿಯಲ್​ ಪ್ರವೀಣ್​ ಪೌಲ್. ಭಾರತೀಯ ಮೂಲದ ಯುವಕ ಡ್ಯಾನಿಯಲ್‌, ಫಿನ್​ ಲ್ಯಾಂಡ್​ನಲ್ಲಿ ‘ಡ್ಯಾನೀಸ್​ ಬಾಲಿವುಡ್​ ಡಾನ್ಸ್​ ಕ್ರೀವ್’​ ಅನ್ನೋ ಹೆಸರಿನಲ್ಲಿ ಒಂದು ತಂಡವನ್ನೇ ಕಟ್ಟಿದ್ದಾರೆ. ಈ ತಂಡದ ಕೆಲಸ ಬಾಲಿವುಡ್​ ಡಾನ್ಸ್​ ನ್ನ ಇಷ್ಟಪಡೋ ಫಿನ್​ ಲ್ಯಾಂಡ್​ ಯುವಕರಿಗೆ ಡಾನ್ಸ್ ಕಲಿಸೋದು. ಡ್ಯಾನಿಯಲ್ ನಮ್ಮ ದೇಶದ ಟಾಲಿವುಡ್​, ಕಾಲಿವುಡ್​ ಹಾಡುಗಳಿಗೂ ಸ್ಟೆಪ್ಸ್ ಹೇಳಿಕೊಡ್ತಾರೆ ಆದರೆ, ಅವೆಲ್ಲದಕ್ಕೂ ‘ಬಾಲಿವುಡ್​ ಸ್ಟೈಲ್ಸ್’ ಅಂತ್ಲೇ ಕರೆಯುತ್ತಾರಷ್ಟೆ.

ಅಮೆರಿಕದ ಡಾನ್ಸ್ ಪ್ರೋಗ್ರಾಂಗಳಲ್ಲಿ, ಕಾಲೇಜು ಫಂಕ್ಷನ್ ​ಗಳಲ್ಲಿ ಭಾರತೀಯ ಸಿನಿಮಾ ಹಾಡಿಗೆ ಬಾಲಿವುಡ್‌ ಸ್ಟೈಲ್‌ ನಲ್ಲಿ ಡಾನ್ಸ್ ಪರ್ಫಾರ್ಮ್​ ಮಾಡೋದು ಸಾಮಾನ್ಯವಾಗಿಬಿಟ್ಟಿದೆಯಂತೆ. ಅಲ್ಲದೆ, ಜಗತ್ತಿನ ವಿವಿಧ ದೇಶಗಳ ಖಾಸಗಿ ಚಾನಲ್ ​ಗಳು ನಡೆಸಿದ ರಿಯಾಲಿಟಿ ಶೋಗಳಲ್ಲಿಯೂ ನಮ್ಮ ಬಾಲಿವುಡ್​ ನೃತ್ಯಗಳು ಪ್ರದರ್ಶನಗೊಂಡಿವೆ. ಯುನೈಟೆಡ್​ ಸ್ಟೇಟ್ಸ್ ​ನ ‘ಸೊ ಯು ಥಿಂಕ್​ ಯು ಕ್ಯಾನ್​ ಡಾನ್ಸ್​’ ಎಂಬ ರಿಯಾಲಿಟಿ ಶೋದಲ್ಲಿ ಅಮೆರಿಕದವರೇ ಇಬ್ಬರು ಸ್ಪರ್ಧಿಗಳು ಬಾಲಿವುಡ್ ಡಾನ್ಸ್ ಮಾಡಿದ್ರು. ಹಾಗೆಯೇ, ಬೆಲ್ಜಿಯಂ ದೇಶದ ಖಾಸಗಿ ಚಾನಲ್​ ನಡೆಸಿದ ರಿಯಾಲಿಟಿ ಶೋದಲ್ಲಿಯೂ ಪುಟಾಣಿಯೊಬ್ಬಳು, ಮೆಲೋಡಿಯಸ್​ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದಳು.

ಹೀಗೆ ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ಅದೇನೇ ಆಗಿರಲಿ ಭಾರತೀಯ ಶೈಲಿಯ ಹಾಡು ಮತ್ತು ನೃತ್ಯಕ್ಕೆ ವಿದೇಶದಲ್ಲಿ ಸಕತ್​ ರೆಸ್ಪಾನ್ಸ್ ಸಿಗ್ತಿರೋದಂತೂ ಸುಳ್ಳಲ್ಲ. ಇಲ್ಲೇ ಇರೋ ನಮಗೆ ನಮ್ಮದೇ ನೃತ್ಯಕ್ಕೆ ಹೊರದೇಶಗಳಲ್ಲಿ ಅದೆಷ್ಟು ಬೆಲೆ ಇದೆ ಅನ್ನೋದರ ಕಲ್ಪನೆಯೇ ಇರೋದಿಲ್ಲ. ಆದ್ರೆ, ನಿಜಕ್ಕೂ ನಮ್ಮ ನೃತ್ಯಕ್ಕೆ ಮೋಡಿ ಮಾಡೋ ಶಕ್ತಿ ಇದೆ…. ಅದು ಎಂಥವರನ್ನೂ ಸೆಳೆಯುತ್ತೆ ಅನ್ನೋಕೆ ಈ ಉದಾಹರಣೆಗಳೇ ಸಾಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...