alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಮುಂದೂಡಲೆಂಬ ಕಾರಣಕ್ಕೆ ನಡೆದಿತ್ತು ಪುಟ್ಟ ಬಾಲಕನ ಹತ್ಯೆ…!

ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದಿದ್ದ 7 ವರ್ಷದ ಬಾಲಕ ಪ್ರದ್ಯುಮನ್ ಠಾಕೂರ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾಗಿದ್ದು, ಕೊಲೆ ಮಾಡಿರುವನೆನ್ನಲಾದ ಇದೇ ಶಾಲೆಯ 11 ನೇ ತರಗತಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಲೆಯ ಟಾಯ್ಲೆಟ್ ನಲ್ಲೇ ಪುಟ್ಟ ಬಾಲಕ ಬರ್ಬರವಾಗಿ ಹತ್ಯೆಯಾದ ಸಂಗತಿ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತಲ್ಲದೇ ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಸೆಪ್ಟೆಂಬರ್ 8 ರಂದು ನಡೆದಿದ್ದ ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಗುರ್ಗಾಂವ್ ಪೊಲೀಸರು ಅಂದು ರಾತ್ರಿಯೇ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಎಂಬಾತನನ್ನು ಬಂಧಿಸಿದ್ದು, ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ಅಶೋಕ್ ಕುಮಾರ್ ಬಾಲಕ ಪ್ರತಿರೋಧ ಒಡ್ಡಿದಾಗ ಹತ್ಯೆ ಮಾಡಿದ್ದನೆಂದು ಆರೋಪಿಸಿದ್ದರು.

ಆದರೆ ಪೊಲೀಸರ ತನಿಖೆಗೆ ಪ್ರದ್ಯುಮನ್ ಠಾಕೂರ್ ಪೋಷಕರಿಗೆ ಸಮಾಧಾನವಿರಲಿಲ್ಲ. ತಮ್ಮ ಮಗನ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದ್ದು, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇದಕ್ಕೆ ಸ್ಪಂದಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಗೊಂಡ ಸಿಬಿಐ ಅಧಿಕಾರಿಗಳು ಸಮಗ್ರ ವಿಚಾರಣೆ ನಡೆಸಿದ್ದು, ಇದೀಗ ಅದೇ ಶಾಲೆಯ 11 ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಕೊಲೆ ಮಾಡಿರುವ ಸಂಗತಿಯನ್ನು ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆನ್ನಲಾಗಿದ್ದು, ಅಂದು ನಡೆಯಬೇಕಿದ್ದ ಪರೀಕ್ಷೆಗೆ ತಾನು ತಯಾರಿ ನಡೆಸಿರಲಿಲ್ಲವಾದ್ದರಿಂದ ಬಾಲಕನ ಕೊಲೆಯಾದರೆ ಪರೀಕ್ಷೆ ಮುಂದೂಡಬಹುದೆಂಬ ಕಾರಣಕ್ಕೆ ಟಾಯ್ಲೆಟ್ ಗೆ ಬಂದಿದ್ದ ಪ್ರದ್ಯುಮನ್ ಠಾಕೂರ್ ಕತ್ತು ಸೀಳಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆನ್ನಲಾಗಿದೆ.

ಈ ಮಧ್ಯೆ ಗುರ್ಗಾಂವ್ ಪೊಲೀಸರ ತನಿಖೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿನಾಕಾರಣ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ನನ್ನು ಆರೋಪಿಯನ್ನಾಗಿಸಿದ್ದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...