ಚಿಕ್ಕ ವಿಚಾರವೊಂದಕ್ಕೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಹಸಮಣೆ ಏರುವ ಬದಲು ಮಸಣದ ಹಾದಿ ಹಿಡಿದಿದ್ದಾರೆ. ಹುಬ್ಬಳ್ಳಿಯ ಕುರ್ಕಿ ಬಸವೇಶ್ವರ ನಗರದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರೇಖಾ ಹಾಗೂ ವಿಷ್ಣು ಪಗಲಾಪುರ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ರೇಖಾ ಎಷ್ಟು ಬಾರಿ ಕಾಲ್ ಮಾಡಿದರೂ ಪ್ರಿಯಕರ ವಿಷ್ಣು ಫೋನ್ ರಿಸೀವ್ ಮಾಡಿಲ್ಲ. ಈ ಕಾರಣಕ್ಕೆ ಬೇಸರಗೊಂಡ ರೇಖಾ ಎಂಬ 19 ವರ್ಷದ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತ ಪ್ರಿಯತಮೆ ಸಾವಿನ ಸುದ್ದಿ ಕೇಳಿದ ಯುವಕ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಹಲವು ವರ್ಷಗಳಿಂದ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಮನೆಯವರ ವಿರೋಧ ಕೂಡ ಇತ್ತು ಎನ್ನಲಾಗಿದೆ. ಈ ವಿರೋಧದ ನಡುವೆಯೇ ಇಬ್ಬರಿಗೆ ನಿಶ್ಚಿತಾರ್ಥ ಮಾಡಲಾಗಿತ್ತಂತೆ. ಅಲ್ಲದೆ ಮದುವೆ ದಿನಾಂಕ ಕೂಡ ನಿಗಧಿಯಾಗಿದೆ. ಆದರೆ ದುರಾದೃಷ್ಟವಶಾತ್ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.